ವೆಲ್ಲಿಂಗ್ಟನ್: ನ್ಯೂಜಿಲೆಂಡ್(IND VS NZ) ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಭಯಮುಕ್ತವಾಗಿ ಹಾಗೂ ಸ್ವತಂತ್ರವಾಗಿ ಆಡಬೇಕೆಂದು ಪಂದ್ಯಕ್ಕೂ ಮುನ್ನವೇ ಆಟಗಾರರಿಗೆ ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ದೈರ್ಯ ತುಂಬಿದ್ದಾರೆ. ಉಭಯ ತಂಡಗಳ ಸರಣಿ ಶುಕ್ರವಾರ ಟಿ20 ಪಂದ್ಯದ ಮೂಲಕ ಆರಂಭಗೊಳ್ಳಲಿದೆ.
ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅನುಪಸ್ಥಿಯಲ್ಲಿ ನ್ಯೂಜಿಲೆಂಡ್ ಪ್ರವಾಸಕ್ಕೆ ಹಂಗಾಮಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿವಿಎಸ್ ಲಕ್ಷ್ಮಣ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಟಿ20 ಕ್ರಿಕೆಟ್‌ನಲ್ಲಿ ಭಯಮುಕ್ತವಾಗಿ ಹಾಗೂ ಸ್ವತಂತ್ರವಾಗಿ ಆಡಬೇಕಾಗುತ್ತದೆ. ಅದರಂತೆ ಮೈದಾನಕ್ಕೆ ತೆರಳಿ ತಮ್ಮನ್ನು ತಾವು ಅಭಿವ್ಯಕ್ತಗೊಳಿಸಬಲ್ಲ ಆಟಗಾರರು ನಮ್ಮಲ್ಲಿದ್ದಾರೆ. ಏನೇ ಆಗಲಿ ಭಯಮುಕ್ತರಾಗಿ ಆಡುವಂತೆ ನಾಯಕ ಹಾಗೂ ಆಟಗಾರರಿಗೆ ತಿಳಿಸಿದ್ದೇವೆ” ಎಂದು ಹೇಳಿದರು.
ಗೊಂದಲ ನಿವಾರಿಸಿ
ನ್ಯೂಜಿಲೆಂಡ್ನ ಪಿಚ್‌ಗಳು ಹಾಗೂ ಸನ್ನಿವೇಶಗಳನ್ನು ಮೊದಲು ಮನಸಿನಿಂದ ತೆಗೆದುಹಾಕಿ ಈ ಟಿ20 ಸರಣಿಯಲ್ಲಿ ಭಯಮುಕ್ತ ಕ್ರಿಕೆಟ್ ಆಡಬೇಕು. ಅದರಂತೆ ಯಾವುದೇ ಗೊಂದಲಕ್ಕೆ ಎಡೆ ಮಾಡಬಾರದು ಎಂದು ವಿವಿಎಸ್ ಲಕ್ಷ್ಮಣ್ ಆಟಗಾರರಿಗೆ ಸಲಹೆ ನೀಡಿದ್ದಾರೆ.
ಪಾಂಡ್ಯ ಅದ್ಭುತ ನಾಯಕ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಮಾತನಾಡಿದ ಲಕ್ಷ್ಮಣ್, ಪಾಂಡ್ಯ ಅದ್ಭುತ ನಾಯಕ ಎಂಬುವುದನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಮತ್ತು ಐರ್ಲೆಂಡ್ ಟಿ20 ಸರಣಿಯ ವೇಳೆ ನಾವು ನೋಡಿದ್ದೇವೆ. ಆಟಗಾರರಿಗೂ ಕೂಡ ಹಾರ್ದಿಕ್ ಮೇಲೆ ಹೆಚ್ಚಿನ ವಿಶ್ವಾಸವಿದೆ” ಎಂದು ವಿವಿಎಸ್ ಲಕ್ಷ್ಮಣ್ ಹೇಳಿದರು.
ಇದನ್ನೂ ಓದಿ | IND VS NZ | ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಯ ನೇರ ಪ್ರಸಾರ, ವೇಳಾಪಟ್ಟಿಯ ಮಾಹಿತಿ