ರಾಯ್ಪುರ: ಪ್ರವಾಸಿ ನ್ಯೂಜಿಲ್ಯಾಂಡ್(IND VS NZ) ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ರೋಚಕ 12 ರನ್ಗಳ ಗೆಲುವು ಸಾಧಿಸಿದ ಟೀಮ್ ಇಂಡಿಯಾ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಉಭಯ ತಂಡದ ಈ ಸೆಣಸಾಟ ಶನಿವಾರ ನಡೆಯಲಿದೆ.
ರಾಯ್ಪುರದ ಶಾಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಇತ್ತಂಡಗಳ ಈ ಕಾದಾಟ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಇದೆ. ಏಕೆಂದರೆ ಸರಣಿಯನ್ನು ಜೀವಂತವಿರಿಸಬೇಕಿದ್ದರೆ ನ್ಯೂಜಿಲ್ಯಾಂಡ್ಗೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕು. ಅತ್ತ ರೋಹಿತ್ ಪಡೆ ಈ ಪಂದ್ಯದಲ್ಲಿಯೂ ಮೇಲುಗೈ ಸಾಧಿಸಿ ಸರಣಿಯನ್ನು ವಶಪಡಿಸುವ ತವಕದಲ್ಲಿದೆ. ಹೀಗಾಗಿ ಈ ಪಂದ್ಯ ಹೈವೋಲ್ಟೇಜ್ ಫೈಟ್ ಎನಿಸಿಕೊಂಡಿದೆ.
ಸುಧಾರಿಸಬೇಕಿದೆ ಭಾರತದ ಬೌಲಿಂಗ್
ಹೈದರಾಬಾದ್ನ ಪಂದ್ಯದಲ್ಲಿ ಭಾರತದ ದೊಡ್ಡ ಮೊತ್ತವನ್ನು ದಾಖಲಿಸಿದರೂ ಗೆಲುವು ದಾಖಲಿಸಿದ್ದು ಮಾತ್ರ ಅಲ್ಪ ಅಂತರದಿಂದ. ಇದಕ್ಕೆ ಪ್ರಮುಖ ಕಾರಣ ಬೌಲರ್ಗಳ ವೈಫಲ್ಯ. ಮೊಹಮ್ಮದ್ ಸಿರಾಜ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಬೌಲರ್ಗಳು ಸರಿಯಾಗಿ ದಂಡಿಸಿಕೊಂಡಿದ್ದರು. ಅದರಲ್ಲೂ ಬ್ರೇಸ್ವೆಲ್ ಎಲ್ಬಿಡಬ್ಲ್ಯೂ ಬಲೆಗೆ ಬೀಳದೆ ಇರುತ್ತಿದ್ದರೆ ಭಾರತ ಸೋಲು ಕಾಣಬೇಕಿತ್ತು. ಆದ್ದರಿಂದ ಈ ಪಂದ್ಯದಲ್ಲಿಯೂ ಬೌಲರ್ಗಳು ಎಚ್ಚೆತ್ತುಕೊಳ್ಳದೆ ಹೋದರೆ ಭಾರತ ಕೈ ಸುಟ್ಟುಕೊಳ್ಳುವುದು ಖಂಡಿತ.
ಬ್ಯಾಟಿಂಗ್ ಮಟ್ಟಿಗೆ ಭಾರತ ಓಕೆ
ಭಾರತದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಯುವ ಆಟಗಾರ ಶುಭಮನ್ ಗಿಲ್ ಆಡಿದ ಪ್ರತಿ ಪಂದ್ಯದಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಬಾರಿಸಿ ಮಿಂಚಿದ ಅವರ ಮೇಲೆ ಈ ಪಂದ್ಯದಲ್ಲಿಯೂ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ. ನಾಯಕ ರೋಹಿತ್ ಶರ್ಮಾ ಕೂಡ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಯಶಸ್ಸು ಕಾಣುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ಉಳಿದಂತೆ ಸ್ಲಾಗ್ ಓವರ್ಗಳಲ್ಲಿ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದು ತಂಡದ ದೊಡ್ಡ ಮೊತ್ತಕ್ಕೇನು ಅಡ್ಡಿಯಿಲ್ಲ. ಆದರೆ ಇಶಾನ್ ಕಿಶನ್ ತಮ್ಮ ಚೇಷ್ಟೆಯನ್ನು ಮರೆತು ಪ್ರಬುದ್ಧ ರೀತಿಯ ವರ್ತನೆ ತೋರಬೇಕಿದೆ. ಕಳೆದ ಪಂದ್ಯದಲ್ಲಿ ಅವರು ಅನಾವಶ್ಯಕವಾಗಿ ಬೇಲ್ಸ್ ಹಾರಿಸಿ ಟೀಕೆಗೆ ಗುರಿಯಾಗಿದ್ದರು. ಆದ್ದರಿಂದ ಅವರು ತಮ್ಮ ಎಲ್ಲ ಚೇಷ್ಟೆಗಳನ್ನು ಬದಿಗಿಟ್ಟು ಬ್ಯಾಟಿಂಗ್ ಮೇಲೆ ಗಮನಹರಿಸಬೇಕಿದೆ.
ತಂಡದ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿಯೂ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಟಾಮ್ ಲ್ಯಾಥಮ್ ಸಾರಥ್ಯದ ಯುವ ಪಡೆ ಈ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಯೋಜನೆ ರೂಪಿಸಿದೆ. ಶಕ್ತಿ ಮೀರಿ ಪ್ರದರ್ಶನ ತೋರುವ ಮೂಲಕ ಸರಣಿಯನ್ನು ಸಮಬಲಕ್ಕೆ ತರುವ ಪಣ ತೊಟ್ಟಿದೆ. ಇನ್ನು ಕಳೆದ ಪಂದ್ಯದ ಶತಕ ವೀರ ಬ್ರೇಸ್ವೆಲ್ ಈ ಪಂದ್ಯದಲ್ಲಿಯೂ ಸ್ಫೋಟಕ ಬ್ಯಾಟಿಂಗ್ ನಡೆಸುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ | IND VS NZ | ಭಾರತ-ನ್ಯೂಜಿಲ್ಯಾಂಡ್ ದ್ವಿತೀಯ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ