ಹ್ಯಾಮಿಲ್ಟನ್: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ದ್ವಿತೀಯ ಏಕದಿನ ಪಂದ್ಯವನ್ನಾಡಲು ಟೀಮ್ ಇಂಡಿಯಾ (IND VS NZ) ಸಜ್ಜಾಗಿದ್ದು ಭಾನುವಾರ ಹ್ಯಾಮಿಲ್ಟನ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಭಾರತ ತಂಡಕ್ಕೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಸ್ಥಿತಿ ಎದುರಾಗಿದೆ. ಸರಣಿಯನ್ನು ಜೀವಂತವಿರಿಸಬೇಕಾದರೆ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಆದ್ದರಿಂದ ಶಿಖರ್ ಧವನ್ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ವಿಲಿಯಮ್ಸನ್ ಪಡೆ ನಿರಾಳ
ಈಗಾಗಲೇ ಮೊದಲ ಪಂದ್ಯವನ್ನು 7 ವಿಕೆಟ್ಗಳಿಂದ ಗೆದ್ದಿರುವ ಕೇನ್ ವಿಲಿಯಮನ್ಸ್ ಪಡೆ ಈ ಪಂದ್ಯದಲ್ಲಿ ಒತ್ತಡ ರಹಿತವಾಗಿ ಕಣಕ್ಕಿಳಿಯಲಿದೆ. ಈ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ಮೂಲಕ ಟಿ20 ಸರಣಿ ಸೋಲಿಗೆ ಸೇಡು ತೀರಿಸುವ ಯೋಜನೆಯಲ್ಲಿದೆ. ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಟಾಮ್ ಲೇಥಮ್ ಈ ಪಂದ್ಯದಲ್ಲಿಯೂ ಸಿಡಿಯುವ ಸಾಧ್ಯತೆ ಇದೆ. ಉಳಿದಂತೆ ನಾಯಕ ವಿಲಿಯಮ್ಸನ್ ಕೂಡ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ಭಾರತದ ಬೌಲಿಂಗ್ ಸುಧಾರಣೆ ಅಗತ್ಯ
ಕಳೆದ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದರೂ ಇದನ್ನು ಉಳಿಸಿಕೊಳ್ಳುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ಸು ಕಂಡಿರಲಿಲ್ಲ. ಆದ್ದರಿಂದ ಯುವ ಬೌಲರ್ಗಳಾದ ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್ ತಮ್ಮ ಎಸೆತಗಳಿಗೆ ಸಾಣೆ ಹಿಡಿಯಬೇಕಿದೆ. ಉಳಿದಂತೆ ಸ್ಪಿನ್ನರ್ಗಳಾದ ಯಜುವೇಂದ್ರ ಚಹಲ್ ಮತ್ತು ವಾಷಿಂಗ್ಟನ್ ಸುಂದರ್ ಚೆಂಡನ್ನು ಬುಗುರಿಯಂತೆ ತಿರುಗಿಸಿ ಕಿವೀಸ್ ಬೌಲರ್ಗಳನ್ನು ಕಾಡಬೇಕಿದೆ.
ಬ್ಯಾಟಿಂಗ್ ಓಕೆ
ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಸಮರ್ಥವಾಗಿದೆ. ಇದಕ್ಕೆ ಕಳೆದ ಪಂದ್ಯವೇ ಉತ್ತಮ ನಿದರ್ಶನ. ನಾಯಕ ಶಿಖರ್ ಧವನ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಆದರೆ ಕಳೆದ ಪಂದ್ಯದಲ್ಲಿ ವೈಫಲ್ಯ ಕಂಡ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಸಿಡಿದು ನಿಂತರೆ ತಂಡ 400ರ ಗಡಿಯನ್ನೂ ದಾಟಬಹುದು.
ಇದನ್ನೂ ಓದಿ | IND VS NZ | ಭಾರತ ಮತ್ತು ಕಿವೀಸ್ ವಿರುದ್ಧದ ದ್ವಿತೀಯ ಏಕದಿನ; ಪಿಚ್ ರಿಪೋರ್ಟ್, ಹವಾಮಾನ ವರದಿ ಹೇಗಿದೆ?