Site icon Vistara News

IND VS NZ | ಲ್ಯಾಥಮ್‌, ವಿಲಿಯಮ್ಸನ್‌ ಬ್ಯಾಟಿಂಗ್‌ ಆರ್ಭಟಕ್ಕೆ ಮಂಕಾದ ಟೀಮ್‌ ಇಂಡಿಯಾ; 7 ವಿಕೆಟ್‌ ಸೋಲು

Tom Latham

ಆಕ್ಲೆಂಡ್‌: ಕೇನ್‌ ವಿಲಿಯಮ್ಸನ್‌(94*) ಟಾಮ್‌ ಲ್ಯಾಥಮ್‌(145*) ಅವರ ಅಜೇಯ ಬ್ಯಾಟಿಂಗ್‌ ಸಾಹಸದಿಂದ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡ 7 ವಿಕೆಟ್‌ ಗೆಲುವು ಸಾಧಿಸಿದೆ. ಕಿವೀಸ್‌ ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮನ್ನಡೆ ಕಾಯ್ದುಕೊಂಡಿದೆ.

ಆಕ್ಲೆಂಡ್​ನ ಈಡನ್​ ಪಾರ್ಕ್​ನಲ್ಲಿ ಶುಕ್ರವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 306 ರನ್​ ಗಳಿಸಿತು. ಗುರಿ ಬೆನ್ನಟಿದ ನ್ಯೂಜಿಲ್ಯಾಂಡ್‌ 47.1 ಓವರ್‌ಗಳಲ್ಲಿ ೩ ವಿಕೆಟ್‌ಗೆ 309 ರನ್‌ ಪೇರಿಸಿ ಗೆಲುವಿನ ನಗೆ ಬೀರಿತು.

ಚೇಸಿಂಗ್‌ ವೇಳೆ ನ್ಯೂಜಿಲ್ಯಾಂಡ್‌ ಆರಂಭಿಕ ಆಟಗಾರರಾದ ಫಿನ್‌ ಅಲೆನ್‌(೨೨), ಡೊವೋನ್‌ ಕಾನ್ವೆ (೨೪) ವಿಕೆಟ್‌ ಕಳೆದುಕೊಂಡು ಆಘಾತ ಎದುರಿಸಿತು. ಆದರೆ ತಂಡಕ್ಕೆ ಆಸರೆಯಾದ ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ಟಾಮ್‌ ಲ್ಯಾಥಮ್‌ ಭರ್ಜರಿ ಬ್ಯಾಟಿಂಗ್‌ ನಡೆಸಿ ತಂಡವನ್ನು ಗೆಲುವಿನಲ್ಲಿ ದಡ ಸೇರಿಸುವಲ್ಲಿ ಯಶಸ್ವಿಯಾದರು. ಲ್ಯಾಥಮ್‌ 145 ರನ್‌ ಗಳಿಸಿದರೆ, ವಿಲಿಯಮ್ಸನ್‌ 94 ರನ್‌ ಗಳಿಸಿ 6 ರನ್‌ ಅಂತರದಲ್ಲಿ ಶತಕ ತಪ್ಪಿಸಿಕೊಂಡರು. ಈ ಜೋಡಿ ಅಜೇಯ ಜತೆಯಾಟ ನಡೆಸಿತು.

ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಪರ ನಾಯಕ ಶಿಖರ್​ ಧವನ್(72)​, ಶುಭಮನ್​ ಗಿಲ್(50)​ ಮತ್ತು ಶ್ರೇಯಸ್‌​ ಅಯ್ಯರ್(80)​ ಪ್ರಚಂಡ ಅರ್ಧಶತಕದ ಬ್ಯಾಟಿಂಗ್​ ನಡೆಸಿ ಮಿಂಚಿದ್ದರು. ಆದರೆ ಕಿವೀಸ್‌ ಗೆಲುವಿನ ಆರ್ಭಟದ ಮುಂದೆ ಇವರ ಈ ಇನಿಂಗ್ಸ್‌ ವ್ಯರ್ಥವಾಯಿತು.

​ಭಾರತಕ್ಕೆ ಉತ್ತಮ ಆರಂಭ

ಹಂಗಾಮಿ ನಾಯಕ ಶಿಖರ್​ ಧವನ್​ ಮತ್ತು ಯುವ ಆಟಗಾರ ಶುಭಮನ್​ ಗಿಲ್​ ಶತಕದ ಜತೆಯಾಟ ನಡೆಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಆರಂಭದಿಂದಲೇ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದ ಉಭಯ ಆಟಗಾರರು ಅರ್ಧಶತಕ ಬಾರಿಸಿ ಮಿಂಚಿದರು. ಆದರೆ 65 ಎಸೆತಗಳಲ್ಲಿ 50 ರನ್‌ ಗಳಿಸಿದ ವೇಳೆ ಶುಭಮನ್ ಗಿಲ್‌ ವಿಕೆಟ್‌ ಒಪ್ಪಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ ಭರ್ಜರಿ 124 ರನ್​ಗಳ ಕೊಡುಗೆ ನೀಡಿತು. ಗಿಲ್​ ಅವರ ವಿಕೆಟ್​ ಪತನದ ಬಳಿಕ ಮುಂದಿನ ಓವರ್​ನಲ್ಲಿ ಧವನ್​ ಅವರ ವಿಕೆಟ್​ ಕೂಡ ಉರುಳಿತು. ಇಲ್ಲಿಗೆ ನ್ಯೂಜಿಲ್ಯಾಂಡ್​ ಕೈ ಮೇಲಾಯಿತು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯ ವಿಕೆಟ್​ ಪತನದ ಬಳಿಕ ಭಾರತ ನಾಟಕೀಯ ಕುಸಿತ ಕಂಡಿತು. ರಿಷಭ್​ ಪಂತ್​(15),​ ಸೂರ್ಯಕುಮಾರ್ ಯಾದವ್​ (4) ವಿಕೆಟ್​ ಕಳೆದು ಸಂಕಷ್ಟಕ್ಕೆ ಸಿಲುಕಿತು.​

ಅಯ್ಯರ್​ ಅರ್ಧಶತಕ

ಆರಂಭಿಕ ವಿಕೆಟ್​ ಪತನದ ಬಳಿಕ ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ಶ್ರೇಯಸ್​ ಅಯ್ಯರ್​ ಮತ್ತು ಸಂಜು ಸ್ಯಾಮ್ಸನ್​ ಆಸರೆಯಾದರು. ಅಯ್ಯರ್​ ಕಿವೀಸ್​ ಬೌಲರ್​ಗಳ ಮೇಲೆರಗಿ ಸಿಕ್ಸರ್​ ಮತ್ತು ಫೋರ್​ ಬಾರಿಸುವ ಮೂಲಕ ತಮ್ಮ ಅರ್ಧಶತಕ ಪೂರೈಸಿದರು. ಜತೆಗೆ ತಂಡದ ಮೊತ್ತವನ್ನೂ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಂದು ತುದಿಯಲ್ಲಿ ಸಂಜು ಸ್ಯಾಮ್ಸನ್​ ಕೂಡ ಅಯ್ಯರ್​ಗೆ ಉತ್ತಮ ಸಾಥ್​ ನೀಡಿದರು. ಸಂಜು 36 ರನ್​ ಗಳಿಸಿ ಮಿಲ್ನೆಗೆ ವಿಕೆಟ್​ ಒಪ್ಪಿಸಿದರು. ಅಯ್ಯರ್​ 76 ಎಸೆತ ಎದುರಿಸಿ 80 ರನ್​ ಬಾರಿಸಿದರು. ಈ ಇನಿಂಗ್ಸ್​ ವೇಳೆ ತಲಾ 4 ಫೋರ್​ ಮತ್ತು ಸಿಕ್ಸರ್​ ಸಿಡಿಯಿತು. ಅಂತಿಮವಾಗಿ ವಾಷಿಂಗ್ಟನ್​ ಸುಂದರ್(ಅಜೇಯ​ 37) ಸಿಡಿದು ನಿಂತ ಕಾರಣ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾಯಿತು.​

ಉಮ್ರಾನ್​-ಅರ್ಶ್​ದೀಪ್​ ಪದಾರ್ಪಣೆ

ಭಾರತ ತಂಡದ ಪರ ಯುವ ವೇಗಿಗಳಾದ ಅರ್ಶ್​ದೀಪ್​ ಸಿಂಗ್‌ ಹಾಗೂ ಉಮ್ರಾನ್‌ ಮಲಿಕ್‌ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಮತ್ತೊಂದೆಡೆ ಟಿ20 ಸರಣಿಯಲ್ಲಿ ಅವಕಾಶ ವಂಚಿತ ಸಂಜು ಸ್ಯಾಮ್ಸನ್‌ ಮೊದಲನೇ ಏಕದಿನ ಪಂದ್ಯದಲ್ಲಿ ಅವಕಾಶ ಪಡೆದರು.

ಸ್ಕೋರ್​ ವಿವರ

ಭಾರತ: 50 ಓವರ್​ಗಳಲ್ಲಿ 7 ವಿಕೆಟ್​ಗೆ 306 (ಶಿಖರ್​ ಧವನ್​ 72, ಶುಭಮನ್​ ಗಿಲ್​ 50, ಶ್ರೇಯಸ್​ ಅಯ್ಯರ್ 80 ​, ಲಾಕಿ ಫರ್ಗ್ಯುಸನ್​ 59ಕ್ಕೆ 3).

ನ್ಯೂಜಿಲ್ಯಾಂಡ್‌: 47.1 ಓವರ್‌ಗಳಲ್ಲಿ ೩ ವಿಕೆಟ್‌ಗೆ 309 (ಕೇನ್‌ ವಿಲಿಯಮ್ಸನ್‌ 94*, ಟಾಮ್‌ ಲ್ಯಾಥಮ್‌ 145*)

ಇದನ್ನೂ ಓದಿ | Casteist BCCI | ಬಾಂಗ್ಲಾದೇಶ ಪ್ರವಾಸಕ್ಕೆ ಸೂರ್ಯಕುಮಾರ್​ಗೆ ರೆಸ್ಟ್, ಸಂಜುಗೆ ಕೊಕ್‌,​ ಇದಕ್ಕೆ ಜಾತಿ ಕಾರಣವಂತೆ!

Exit mobile version