ಕರಾಚಿ: ನ್ಯೂಜಿಲ್ಯಾಂಡ್(IND VS NZ) ವಿರುದ್ಧದ ದ್ವಿತೀಯ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಂಡಿದೆ. ಭಾರತದ ಈ ಸಾಧನೆಯ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ರಮೀಜ್ ರಾಜಾ ಪಾಕ್ ಕ್ರಿಕೆಟ್ ತಂಡಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಟೀಮ್ ಇಂಡಿಯಾದ ಗೆಲುವಿನ ಬಳಿಕ ರಮೀಜ್ ರಾಜಾ ಅವರು ಪಾಕಿಸ್ತಾನ ಕ್ರಿಕೆಟ್ ಆಟಗಾರರಿಗೆ ಭಾರತದ ಈ ಸರಣಿ ಗೆಲುವನ್ನು ನೋಡಿ ಕಲಿಯಿರಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಮೀಜ್ ರಾಜಾ ಹೀಗೆ ಹೇಳಲು ಪ್ರಮುಖ ಕಾರಣ, ನ್ಯೂಜಿಲ್ಯಾಂಡ್ ವಿರುದ್ಧದ ತವರಿನ ಸರಣಿಯಲ್ಲಿ ಪಾಕಿಸ್ತಾನ ತಂಡ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿತ್ತು. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ ನಡೆದ ತವರಿನ ಟೆಸ್ಟ್ ಸರಣಿಯಲ್ಲೂ ಪಾಕ್ ಸೋಲು ಕಂಡಿತ್ತು. ಇದೇ ಕೋಪದಲ್ಲಿ ರಾಜಾ, ಪಾಕ್ ಕ್ರಿಕೆಟ್ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಏಕದಿನ ವಿಶ್ವಕಪ್ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವುದರಿಂದ ತವರಿನಲ್ಲಿ ಭಾರತ ಎಷ್ಟು ಬಲಿಷ್ಠ ಎನ್ನುವುದು ಕಿವೀಸ್ ವಿರುದ್ಧದ ಸರಣಿಯಿಂದ ಸಾಬೀತಾಗಿದೆ. ಹೀಗಾಗಿ ಪಾಕಿಸ್ತಾನ ಆಟಗಾರರು ಈಗಿನಿಂದಲೇ ಸಕಲ ಸಿದ್ಧತೆ ಆರಂಭಿಸಬೇಕು ಎಂದು ರಮೀಜ್ ರಾಜಾ ಪಾಕ್ ಆಟಗಾರರಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ | IND VS NZ: ರಾಯ್‌ಪುರದಲ್ಲಿ ಟೀಮ್ ಇಂಡಿಯಾದ ರಾಯಭಾರ; ಕಿವೀಸ್ ವಿರುದ್ಧ 8 ವಿಕೆಟ್ ಗೆಲುವು