Site icon Vistara News

IND vs NZ: ತಂಡದ ಬಗ್ಗೆ ಕೋಚ್ ರಾಹುಲ್​​ ದ್ರಾವಿಡ್​ ಹೇಳಿದ್ದೇನು?

rahul dravid

ಮುಂಬಯಿ: ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್​ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾದ ಕೋಚ್​ ರಾಹುಲ್ ದ್ರಾವಿಡ್ ಅವರು ತಮ್ಮ ತಂಡದ ಪ್ರದರ್ಶನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಭಾರತ ತಂಡವು ಒತ್ತಡ ನಿಭಾಯಿಸಿ ಆಡಲಿದೆ ಎಂದು ಹೇಳಿದ್ದಾರೆ.

ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದ್ರಾವಿಡ್​, ಸೆಮಿಫೈನಲ್ ಪಂದ್ಯವನ್ನು ಸಾಮಾನ್ಯ ಪಂದ್ಯದಂತೆ ನೋಡುವುದು ಸರಿಯಲ್ಲ. ಇದು ಪ್ರಧಾನ ಪಂದ್ಯ ಇಲ್ಲಿ ತಂಡದ ಭವಿಷ್ಯ ಅಡಗಿರುತ್ತದೆ. ಹಿಂದೆ ಎಷ್ಟು ಲೀಗ್​ ಪಂದ್ಯಗಳನ್ನು ಗೆದ್ದಿದೇವೆ ಎನ್ನುವುದು ಲೆಕ್ಕಕ್ಕೆ ಬರುವುದಿಲ್ಲ. ನಮ್ಮ ಕಾರ್ಯಗಳಲ್ಲಿ ಹೆಚ್ಚಿನ ಬದಲಾವಣೆಯಾಗದು. ಇದು ಮಹತ್ವದ ಪಂದ್ಯವೆಂದು ನಾವು ಗುರುತಿಸುತ್ತೇವೆ. ಇಲ್ಲಿ ನಿರ್ದಿಷ್ಟ ಪ್ರಮಾಣದ ಒತ್ತಡ ಇರುತ್ತದೆ ಎಂಬ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು. ಆದರೂ ಇದನ್ನು ನಿಭಾಯಿಸಿ ಆಡಬೇಕು, ನಮ್ಮ ಆಟಗಾರರು ಇದನ್ನು ಮಾಡುತ್ತಾರೆ ಎನ್ನುವ ಎಲ್ಲ ವಿಶ್ವಾಸವಿದೆ” ಎಂದು ಡ್ರಾವಿಡ್​ ಹೇಳಿದ್ದಾರೆ.

ಇದನ್ನೂ ಓದಿ IND vs NZ: ವಾಂಖೆಡೆಯಲ್ಲಿ ಭಾರತ ವಿರುದ್ಧ ನ್ಯೂಜಿಲ್ಯಾಂಡ್​ ತಂಡದ್ದೇ ಪಾರಮ್ಯ!

ನಾಯಕನ ಬಗ್ಗೆ ಮೆಚ್ಚುಗೆ

“ನಿಜಕ್ಕೂ ನಾಯಕ ರೋಹಿತ್​ ಶರ್ಮ ಅವರನ್ನು ಮೆಚ್ಚಬೇಕು. ಆನ್​ ಫೀಲ್ಡ್​ನಲ್ಲಿ ಅವರು ತಂಡವನ್ನು ಮುನ್ನಡೆಸುವ ಕಾರ್ಯತಂತ್ರ ಬಹಳ ಉತ್ತಮವಾಗಿದೆ. ಇದೇ ಕಾರಣಕ್ಕೆ ಲೀಗ್​ನ ಎಲ್ಲ ಪಂದ್ಯಗಳಲ್ಲಿಯೂ ಗೆಲ್ಲಲು ಕಾರಣ. ಬೌಲರ್​ಗಳ ಮೇಲು ಹೆಚ್ಚಿನ ವಿಶ್ವಾಸವಿದೆ. ತಂಡದ 5 ಪ್ರಮುಖ ಬೌಲರ್​ಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ನನಗೆ ಎಲ್ಲ ಆಟಗಾರರ ಮೇಲೆ ವಿಶ್ವಾಸವಿದೆ. ಈ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ನಾವು ಆತ್ಮವಿಶ್ವಾಸದಿಂದ ಇದ್ದೇವೆ” ಎಂದು ಹೇಳಿದರು.

ಸೆಮಿಫೈನಲ್ ಪಂದ್ಯದ ಮೇಲೆ ಗಮನ ಕೇಂದ್ರಿಕರಿಸಿ; ನಾಯಕ ರೋಹಿತ್

ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ(Rohit Sharma), ಲೀಗ್​ ಹಂತದ ಫಲಿತಾಂಶವನ್ನು ಬದಿಗಿಟ್ಟು ಸೆಮಿಫೈನಲ್ ಪಂದ್ಯದ ಮೇಲೆ ಗಮನ ಕೇಂದ್ರಿಕರಿಸಬೇಕಿದೆ ಎಂದು ಸಹ ಆಟಗಾರರಿಗೆ ಸೂಚನೆ ನೀಡಿದ್ದಾರೆ. “ಲೀಗ್ ಹಂತದಲ್ಲಿ ನಮ್ಮ ತಂಡದ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ಆಡಿದ ಎಲ್ಲ ಒಂಬತ್ತು ಪಂದ್ಯಗಳಲ್ಲಿಯೂ ನಾವು ಗೆಲುವು ಸಾಧಿಸಿದ್ದೇವೆ. ಆದರೆ ಇದನ್ನು ಈಗ ಮರೆಯಲೇ ಬೇಕು. ಏನಿದ್ದರು ಸೆಮಿಫೈನಲ್ ಪಂದ್ಯದ ಮೇಲೆ ಗಮನ ಕೇಂದ್ರಿಕರಿಸಬೇಕು. ಉತ್ತಮ ಕ್ರಿಕೆಟ್​ ಆಡಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ ಅಂಪೈರ್‌ಗಳ ಪಟ್ಟಿ ಕಂಡು ನಿಟ್ಟುಸಿರು ಬಿಟ್ಟ ಟೀಮ್​ ಇಂಡಿಯಾ ಅಭಿಮಾನಿಗಳು; ಕಾರಣ ಏನು?

ಒತ್ತಡ ಸಹಜ

ಲೀಗ್​ ಪಂದ್ಯಗಳಲ್ಲಿ ಸೋತರೆ ಇನ್ನೊಂದು ಅವಕಾಶವಿರುತ್ತದೆ. ಆದರೆ ಸೆಮಿಫೈನಲ್​ನಲ್ಲಿ ಎಡವಿದರೆ ಮತ್ತೊಂದು ಪಂದ್ಯದ ಆಯ್ಕೆ ಇರುವುವುದಿಲ್ಲ. ಸೆಮಿ ಎಂದರೆ ಆಟಗಾರರಲ್ಲಿ ಒತ್ತಡ ನಿರ್ಮಾಣವಾಗುವುದು ಸಹಜ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ದೈರ್ಯದಿಂದಲೇ ಉತ್ತಮ ಕ್ರಿಕೆಟ್​ ಆಡಬೇಕು ಎಂದು ರೋಹಿತ್​ ತಮ್ಮ ತಂಡದ ಸಹ ಆಟಗಾರರಿಗೆ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸ ತುಂಬಿದ್ದಾರೆ.

ನ್ಯೂಜಿಲ್ಯಾಂಡ್​ ಶಿಸ್ತಿನ ತಂಡ

ಕ್ರಿಕೆಟ್​ನಲ್ಲಿ ನ್ಯೂಜಿಲ್ಯಾಂಡ್​ ಅತ್ಯಂತ ಶಿಸ್ತಿನ ತಂಡವಾಗಿದೆ. ಎದುರಾಳಿ ತಂಡದ ಬಲಾಬಲವನ್ನು ಅವರು ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ. ಹಲವು ವರ್ಷಗಳಿಂದ ಈ ತಂಡ ಐಸಿಸಿ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್‌ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಲೇ ಬಂದಿದೆ. ನಾವು ಕೂಡ ಹಲವು ಏರಿಳಿತವನ್ನು ಕಂಡಿದದೇವೆ. ಹೀಗಾಗಿ ಎಚ್ಚರಿಕೆಯಿಂದ ಆಡುವ ಅಗತ್ಯವಿದೆ ಎಂದು ರೋಹಿತ್​ ಶರ್ಮ ಹೇಳಿದರು.

Exit mobile version