ಅಹಮದಾಬಾದ್: ಈಗಾಗಲೇ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-1 ಸಮಬಲ ಸಾಧಿಸಿರುವ ಭಾರತ ಮತ್ತು ನ್ಯೂಜಿಲ್ಯಾಂಡ್(IND VS NZ) ಅಂತಿಮ ಹಾಗೂ ನಿರ್ಣಾಯಕ ಪಂದ್ಯವನ್ನಾಡಲು ಸಜ್ಜಾಗಿದೆ. ಇಲ್ಲಿ ಯಾರೇ ಗೆದ್ದರು ಸರಣಿ ವಶಪಡಿಸಿಕೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಉಭಯ ತಂಡಗಳ ಈ ಪ್ರಶಸ್ತಿ ಕಾಳಗವನ್ನು ಜಿದ್ದಾಜಿದ್ದಿನಿಂದ ನಿರೀಕ್ಷಿಸಬಹುದು.
ನ್ಯೂಜಿಲ್ಯಾಂಡ್ ತಂಡ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ಯೋಜನೆಯಲ್ಲಿದೆ. ಅತ್ತ ಹಾರ್ದಿಕ್ ಪಾಂಡ್ಯ ಈ ಸರಣಿಯನ್ನು ಗೆದ್ದು ಟಿ20 ಕ್ರಿಕೆಟ್ಗೆ ಖಾಯಂ ನಾಯಕನಾಗುವ ಇರಾದೆಯಲ್ಲಿದ್ದಾರೆ. ಆದರೆ ಬಧವಾರದ ಅದೃಷ್ಟ ಯಾರ ಪಾಲಿಗೆ ಒಲಿಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಗಿಲ್-ಇಶಾನ್ ಫ್ಲಾಪ್ ಶೋ
ಏಕದಿನ ಕ್ರಿಕೆಟ್ನ ದ್ವಿಶತಕ ವೀರರಾದ ಇಶಾನ್ ಕಿಶನ್ ಮತ್ತು ಶುಭಮನ್ಗಿಲ್ ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿಯೂ ಫ್ಲಾಪ್ ಶೋ ಕಂಡಿದ್ದಾರೆ. ಈ ಮೂಲಕ ತಮ್ಮ ಮೇಲಿದ್ದ ಎಲ್ಲ ನಿರೀಕ್ಷೆಯನ್ನು ಹುಸಿಯಾಗಿಸಿದ್ದಾರೆ. ಇಶಾನ್ ಕಿಶನ್ ಬ್ಯಾಟಿಂಗ್ ಜತೆಗೆ ಕೀಪಿಂಗ್ನಲ್ಲಿಯೂ ಸಂಪೂರ್ಣ ವೈಫಲ್ಯ ಕಾಣುತ್ತಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಕಳೆದ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಕಿಶನ್ ಹಲವು ಕ್ಯಾಚ್ ಕೈಚೆಲ್ಲಿದ್ದರು. ಈ ಪಂದ್ಯದಲ್ಲಿಯೂ ಇಂತಹದ್ದೇ ಎಡವಟ್ಟು ಮಾಡಿದರೆ ಪಂದ್ಯದ ಫಲಿತಾಂಶಕ್ಕೆ ಡೊಡ್ಡ ಹೊಡೆತ ಬೀಳುವುದು ಖಚಿತ ಎನ್ನಲಡ್ಡಿಯಿಲ್ಲ.
ಭಾರತದ ಸ್ಪಿನ್ ಬೌಲಿಂಗ್ ವಿಭಾಗ ಘಾತಕವಾಗಿ ಗುರುತಿಸಿಕೊಂಡಿದೆ. ಚೈನಾಮನ್ ಖ್ಯಾತಿಯ ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್ ಉತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಆದರೆ ವೇಗಿಗಳಾದ ಅರ್ಶ್ದೀಪ್ ಸಿಂಗ್, ಶಿವಂ ಮಾವಿ ದುಬಾರಿಯಾತ್ತಿರುವುದು ಕೊಂಚ ಹಿನ್ನಡೆಯಾಗುತ್ತಿದೆ.
ಇದನ್ನೂ ಓದಿ IND VS NZ: ಅಹಮದಾಬಾದ್ ಸ್ಟೇಡಿಯಂನಲ್ಲಿ ನಡೆದ ಟಿ20 ಪಂದ್ಯಗಳ ದಾಖಲೆಯ ಮಾಹಿತಿ
ಕಿವೀಸ್ ಸಮರ್ಥ ತಂಡ
ಲಕ್ನೋದಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿದರೂ ಕಿವೀಸ್ ಈ ಪಂದ್ಯದಲ್ಲಿ ಅಷ್ಟು ಸುಲಭವಾಗಿ ಬಗ್ಗಲಿಲ್ಲ. ಪಂದ್ಯದ ಕೊನೆಯ ಎಸೆತದ ವರೆಗೂ ಎದುರಾಳಿಗೆ ಸವಾಲೊಡ್ಡುವ ಮೂಲಕ ಗಮನಸೆಳೆಯಿತು. ಜತೆಗೆ ಕಳಪೆ ಮಟ್ಟದ ಪಿಚ್ ಕೂಡ ಕಿವೀಸ್ ಸೋಲಿಗೆ ಕಂಟಕವಾಗಿ ಪರಿಣಮಿಸಿತು. ಆದ್ದರಿಂದ ಕಿವೀಸ್ ಈ ಪಂದ್ಯದಲ್ಲಿ ತಿರುಗಿ ಬೀಳುವ ಎಲ್ಲ ಸಾಧ್ಯತೆ ಇದೆ. ಡೇರಿಲ್ ಮಿಚೆಲ್, ಡೆವೋನ್ ಕಾನ್ವೆ, ಗ್ಲೆನ್ ಫಿಲಿಪ್ಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಯಾವ ಹಂತದಲ್ಲಾದರೂ ಸಿಡಿದು ನಿಂತು ಪಂದ್ಯದ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಭಾರತ ಎಚ್ಚರಿಕೆಯಿಂದ ಆಡಬೇಕಿದೆ.