ಕ್ರೈಸ್ಟ್ ಚರ್ಚ್: ಸತತ ಬ್ಯಾಟಿಂಗ್ ವೈಫಲ್ಯದಿಂದ ಕ್ರಿಕೆಟ್ ಲೋಕದಲ್ಲಿ ಸುದ್ದಿಯಲ್ಲಿರುವ ರಿಷಭ್ ಪಂತ್ ತಮ್ಮ ಕಳಪೆ ಪ್ರದರ್ಶನದ ಕುರಿತು ಟೀಕೆ ಮಾಡುವವರಿಗೆ ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ. ನನಗೆ ಕೇವಲ 25 ವರ್ಷ ಏನಾದರು ಹೋಲಿಕೆ ಮಾಡುವುದಾದರೆ ನನಗೆ 31-32 ವರ್ಷದವನಿದ್ದಾಗ ಮಾಡಿ ಎಂದು ಹೇಳಿದ್ದಾರೆ.
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್(IND VS NZ) ವಿರುದ್ಧದ ಅಂತಿಮ ಏಕ ದಿನ ಪಂದ್ಯಕ್ಕೂ ಮೊದಲು ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ತಮ್ಮ ಪ್ರದರ್ಶನದ ಕುರಿತು ಎದ್ದಿರುವ ಪ್ರಶ್ನೆಗಳ ಬಗ್ಗೆ ಪಂತ್ ಬಳಿ ಪ್ರತಿಕ್ರಿಯೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಿಷಬ್ ಪಂತ್ ನನ್ನ ಏಕ ದಿನ ಮತ್ತು ಟಿ20 ಮಾದರಿಯ ಪ್ರದರ್ಶನ ಟೆಸ್ಟ್ ಕ್ರಿಕೆಟ್‌ನಲ್ಲಿರುವಂತೆಯೇ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ದಾಖಲೆಗಳ ಮೇಲೆ ನಂಬಿಕೆ ಇಲ್ಲ
ಟೆಸ್ಟ್ ಕ್ರಿಕೆಟ್ ಮತ್ತು ಸೀಮಿತ ಓವರ್ಗಳ ಕ್ರಿಕೆಟ್‌ನ ಪ್ರದರ್ಶನದ ನಡುವಿನ ವ್ಯತ್ಯಾಸವೇನು?. ಎರಡೂ ಸ್ವರೂಪಗಳ ದಾಖಲೆಗಳು ಎರಡು ವಿಭಿನ್ನ ಕಥೆಗಳನ್ನು ಹೇಳುತ್ತವೆಯೇ? ಎಂಬ ಪ್ರಶ್ನೆಯನ್ನು ಪಂತ್ ಬಳಿ ಕೇಳಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಪಂತ್, ನನಗೆ ದಾಖಲೆಗಳಲ್ಲಿ ನಂಬಿಕೆ ಇಲ್ಲ. ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡಿದ್ದೇನೆ. ಹಾಗೆಯೇ ವೈಟ್ ಬಾಲ್ ಕ್ರಿಕೆಟ್‌ನಲ್ಲಿಯೂ ನನ್ನ ದಾಖಲೆ ಉತ್ತಮವಾಗಿದೆ. ಅಲ್ಲದೆ ನನಗೀಗ ಕೇವಲ 25 ವರ್ಷ. ಏನಾದರು ಹೋಲಿಕೆ ಮಾಡಬೇಕಾದರೆ ನಾನು 31-32 ವರ್ಷದವನಿದ್ದಾಗ ಮಾಡಿ ಎಂದಿದ್ದಾರೆ.
ಪಂದ್ಯಕ್ಕೂ ಮುನ್ನ ಈ ಹೇಳಿಕೆ ನೀಡಿದ ಪಂತ್, ಅಂತಿಮ ಪಂದ್ಯದಲ್ಲಿ ಉತ್ತಮವಾಗಿ ಆಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಪಂತ್ ಅದೇ ರಾಗ ಅದೇ ಹಾಡು ಎಂಬಂತೆ ಕೇವಲ 10 ರನ್ಗೆ ವಿಕೆಟ್ ಒಪ್ಪಿಸಿ ಮತ್ತೆ ತಮ್ಮ ಘೋರ ಬ್ಯಾಟಿಂಗ್ ವೈಫಲ್ಯವನ್ನು ಮುಂದುವರಿಸಿದರು. ಒಂದೊಮ್ಮೆ ಮುಂದಿನ ಸರಣಿಯಲ್ಲಿ ಪಂತ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಿಸಿಕೊಳ್ಳದಿದ್ದರೆ ತಂಡದಿಂದ ಹೊರಬೀಳುವುದರಲ್ಲಿ ಎರಡು ಮಾತಿಲ್ಲ ಎನ್ನಬಹುದು.
ಇದನ್ನೂ ಓದಿ | INDvsNZ | ಬ್ಯಾಟಿಂಗ್ ವೈಫಲ್ಯ, ಸಾಧಾರಣ ಮೊತ್ತ ಪೇರಿಸಿದ ಭಾರತ; ಕಿವೀಸ್ ಬಳಗಕ್ಕೆ 220 ರನ್ ಗೆಲುವಿನ ಗುರಿ