ಕ್ರೈಸ್ಟ್ಚರ್ಚ್: ಭಾರತ ಮತ್ತು ನ್ಯೂಜಿಲ್ಯಾಂಡ್ (IND VS NZ) ನಡುವಿನ ಏಕ ದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಬುಧವಾರ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯಲಿದೆ. ಸರಣಿ ಉಳಿಸಿಕೊಳ್ಳಬೇಕಾದರೆ ಶಿಖರ್ ಧವನ್ ಪಡೆಗೆ ಈ ಪಂದ್ಯದಲ್ಲಿ ಗೆಲುವು ಅಗತ್ಯ. ಆದ್ದರಿಂದ ಟೀಮ್ ಇಂಡಿಯಾದ ಆಟಗಾರರು ಇಲ್ಲಿ ಶಕ್ತಿಮೀರಿ ಪ್ರಯತ್ನ ನಡೆಸಬೇಕಿದೆ. ಜತೆಗೆ ಮಳೆಯೂ ಈ ಪಂದ್ಯಕ್ಕೆ ಅನುವು ಮಾಡಿಕೊಡಬೇಕಿದೆ.
ಹ್ಯಾಮಿಲ್ಟನ್‌ನಲ್ಲಿ ನಡೆಯ ಬೇಕಿದ್ದ ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದೀಗ ಅಂತಿಮ ಪಂದ್ಯಕ್ಕೂ ಮಳೆಯಾಗುವ ನಿರೀಕ್ಷೆ ಇದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಈಗಾಗಲೇ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ನ್ಯೂಜಿಲ್ಯಾಂಡ್ ತಂಡ ಸರಣಿ ವಶಪಡಿಸಿಕೊಳ್ಳಲಿದೆ.
ಸಂಜುಗೆ ಅವಕಾಶ ನಿರೀಕ್ಷೆ
ಸತತ ವೈಫಲ್ಯದ ನಡುವೆಯೂ ಹಲವು ಅವಕಾಶ ಪಡೆದ ರಿಷಭ್ ಪಂತ್ ಅವರನ್ನು ಈ ಪಂದ್ಯದಿಂದ ಕೈಬಿಡುವ ಸಾಧ್ಯತೆ ದಟ್ಟವಾಗಿದೆ. ಅವರ ಬದಲಿಗೆ ಕೇರಳದ ಸಂಜು ಸ್ಯಾಮ್ಸನ್ಗೆ ಈ ಪಂದ್ಯದಲ್ಲಿ ಆಡುವ ಅವಕಾಶ ನೀಡುವ ಸಾಧ್ಯತೆ ಇದೆ. ಈಗಾಗಲೇ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡದ ಕುರಿತು ಬಿಸಿಸಿಐ ಮತ್ತು ಆಯ್ಕೆ ಸಮಿತಿ ವಿರುದ್ಧ ಸಾಕಷ್ಟು ಟೀಕೆ ಮತ್ತು ಆಕ್ರೋಶ ವ್ಯಕ್ತವಾಗಿದೆ. ಇನ್ನು ಸಂಜು ಕೀಪರ್ ಕೂಡ ಆದ ಕಾರಣ ಪಂತ್ ಅವರನ್ನು ಕೈ ಬಿಟ್ಟರೆ ಈ ಜವಾಬ್ದಾರಿನ್ನೂ ನಿಭಾಯಿಸುವ ಸಾಮರ್ಥ್ಯ ಅವರಿಗಿದೆ. ಈ ನಿಟ್ಟಿನಲ್ಲಿ ಸಂಜುಗೆ ಅವಕಾಶ ಸಿಗಬಹುದು.
ಭಾರತದ ಬೌಲಿಂಗ್ ಕೊಂಚ ಮಟ್ಟಿನ ಯಶಸ್ಸು ಕಾಣಬೇಕಿದೆ. ಮೊದಲ ಪಂದ್ಯದಲ್ಲಿ ದುಬಾರಿಯಾದ ಬೌಲರ್ಗಳು ಇಲ್ಲಿ ಹಿಡಿತ ಸಾಧಿಸಬೇಕಿದೆ. ಸದ್ಯ ಬ್ಯಾಟಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾ ಬಲಿಷ್ಠವಾಗಿದೆ. ಸೂರ್ಯಕುಮಾರ್, ಶ್ರೇಯಸ್ ಅಯ್ಯರ್, ಶುಭಮನ್ ಗಿಲ್ ಉತ್ತಮ ಫಾರ್ಮ್ನಲ್ಲಿದ್ದಾರೆ.
ಎದುರಾಳಿ ನ್ಯೂಜಿಲ್ಯಾಂಡ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ನಾಯಕ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲೇಥಮ್ ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಉಳಿದಂತೆ ಟಿಮ್ ಸೌಥಿ, ಲಾಕಿ ಫರ್ಗ್ಯುಸನ್ ಎದುರಾಳಿ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.
ಇದನ್ನೂ ಓದಿ | IND VS NZ | ಅಭಿಮಾನಿಗಳ ಟೀಕೆ ಮತ್ತು ಪ್ರಶಂಸೆಯನ್ನು ಸಮಾನವಾಗಿ ಸ್ವೀಕರಿಸಬೇಕು; ಅರ್ಶ್ದೀಪ್ ಸಿಂಗ್