ವೆಲ್ಲಿಂಗ್ಟನ್: ಆಸ್ಟ್ರೇಲಿಯಾದಲ್ಲಿ ಮುಕ್ತಾಯಗೊಂಡ ಟಿ20 ವಿಶ್ವ ಕಪ್ ಟೂರ್ನಿಯ ಸೆಮಿಫೈನಲ್ನಲ್ಲಿ ಸೋತು ನಿರಾಶೆ ಅನುಭವಿಸಿದ ಟೀಮ್ ಇಂಡಿಯಾ(IND VS NZ) ಹಲವು ಬದಲಾವಣೆಯೊಂದಿಗೆ 2024ರ ಟಿ20 ವಿಶ್ವ ಕಪ್ ಟೂರ್ನಿಯತ್ತ ಗಮನಹರಿಸಿದೆ. ಇದರ ಭಾಗವಾಗಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ನೂತನ ಯುವ ಪಡೆಯೊಂದನ್ನು ನ್ಯೂಜಿಲೆಂಡ್ ಸರಣಿಗೆ ಕಳುಹಿಸಲಾಗಿದೆ. ಅದರಂತೆ ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡ ಶುಕ್ರವಾರ ಅನುಭವಿ ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.
ಈ ಸರಣಿ ಭಾರತ ಪಾಲಿಗೆ ಮಹತ್ವಾಗಿದೆ. ಹಿರಿಯ ಆಟಗಾರರಾದ ರೋಹಿತ್, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಒಂದೊಮ್ಮೆ ಈ ಸರಣಿಯಲ್ಲಿ ಯಂಗ್ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದರೆ ಭಾರತದ ಟಿ20 ಇತಿಹಾಸದಲ್ಲಿ ನೂತನ ದಿಶೆಯೊಂದು ಆರಂಭವಾಗಲಿದೆ. ಜತೆಗೆ ಟಿ20 ಮಾದರಿಗೆ ಹಾರ್ದಿಕ್ ಪಾಂಡ್ಯ ನಾಯಕನಾಗಿ ಚುಕ್ಕಾಣಿ ಹಿಡಿದರೂ ಅಚ್ಚರಿಯಿಲ್ಲ.
ಆರಂಭಿಕ ಜೋಡಿ ಯಾರು
ಐಪಿಎಲ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಇಶಾನ್ ಕಿಶಾನ್ ಸಂಜು ಸ್ಯಾಮ್ಸನ್, ಶುಭಮನ್ ಗಿಲ್ ಮಧ್ಯೆ ಇನಿಂಗ್ಸ್ ಆರಂಭಿಸಲು ರೇಸ್ ಏರ್ಪಟ್ಟಿದೆ. ಇಶಾನ್ ಕಿಶನ್ ಈಗಾಗಲೇ ಟಿ20ಯಲ್ಲಿ ಭಾರತ ತಂಡದ ಪರ ಆರಂಭಿಕನಾಗಿ ಆಡಿದ್ದಾರೆ. ಆದರೆ ಶುಭಮನ್ ಗಿಲ್ ಏಕದಿನ ಮತ್ತು ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದರೂ ಆಕ್ರಮಣಕಾರಿ ಆಟಗಾರನಲ್ಲ. ಈ ನಿಟ್ಟಿನಲ್ಲಿ ಸಂಜು ಮತ್ತು ಇಶಾನ್ ಕಿಶಾನ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು.
ತಂಡದ ಬಗ್ಗೆ ನಾಯಕ ಹಾರ್ದಿಕ್ ವಿಶ್ವಾಸ
ಪಂದ್ಯಕ್ಕೂ ಮುನ್ನ ಮಾತನಾಡಿದ ಹಾರ್ದಿಕ್ ಪಾಂಡ್ಯ “ವಿಶ್ವಕಪ್ ಸಾಧನೆ ನಿರಾಸೆ ಮೂಡಿಸಿದೆ. ಆದರೆ ನಾವು ವೃತ್ತಿಪರ ಆಟಗಾರರು. ಇದನ್ನೆಲ್ಲ ನಿಭಾಯಿಸಿಕೊಂಡು ಮುಂದುವರಿಯಲಿದ್ದೇವೆ. ತಪ್ಪುಗಳನ್ನು ತಿದ್ದಿಕೊಂಡು ನಡೆದರೆ ಧನಾತ್ಮಕ ಫಲಿತಾಂಶ ಸಾಧ್ಯ. ನಮ್ಮ ಈ ತಂಡದ ತುಂಬ ಯುವ ಆಟಗಾರರೇ ತುಂಬಿದ್ದಾರೆ. ಎಲ್ಲರೂ ಖುಷಿ ಖುಷಿಯಲ್ಲಿದ್ದಾರೆ. ಅದರಂತೆ ಈ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರುವ ವಿಶ್ವಾಸ ಇದೆ” ಎಂದು ಹಂಗಾಮಿ ನಾಯಕ ಪಾಂಡ್ಯ ಆಟಗಾರರ ಬಗ್ಗೆ ವಿಶ್ವಾಸದ ನುಡಿಗಳನ್ನಾಡಿದ್ದಾರೆ.
ಪೂರ್ಣ ಪ್ರಮಾಣದ ನಾಯಕತ್ವದ ಸುಳಿವು ನೀಡಿದ ಪಾಂಡ್ಯ
“ಮುಂದಿನ ಟಿ20 ವಿಶ್ವ ಕಪ್ ಪಂದ್ಯಾವಳಿಗೆ ಈ ಸರಣಿಯೇ ಮೊದಲ ಮೆಟ್ಟಿಲಾಗಬೇಕು, ಇಲ್ಲಿಂದಲೇ ಸೂಕ್ತ ಕಾರ್ಯಯೋಜನೆ ರೂಪಿಸಿಕೊಂಡು ಮುಂದಡಿ ಇಡಬೇಕು. ಟಿ20 ವಿಶ್ವ ಕಪ್ ಪಂದ್ಯಾವಳಿಗೆ ಇನ್ನೂ 2 ವರ್ಷ ಇದೆ. ಈ ಅವಧಿಯಲ್ಲಿ ನಾವು ಸಾಕಷ್ಟು ಕ್ರಿಕೆಟ್ ಆಡಲಿಕ್ಕಿದೆ. ಎಲ್ಲರಿಗೂ ಧಾರಾಳ ಅವಕಾಶ ಲಭಿಸಲಿದೆ” ಎಂದು ಹೇಳುವ ಮೂಲಕ ಪಾಂಡ್ಯ ಪೂರ್ಣ ಪ್ರಮಾಣದ ನಾಯಕತ್ವ ವಹಿಸುವ ಸುಳಿವೊಂದನ್ನು ನೀಡಿದ್ದಾರೆ. ಒಟ್ಟಾರೆ ಕಿವೀಸ್ ಸರಣಿಯ ಫಲಿತಾಂಶದ ಆಧಾರದಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.
ಸೂರ್ಯಕುಮಾರ್ ಮೇಲೆ ವಿಶ್ವಾಸ
ಟಿ20 ಕ್ರಿಕೆಟ್ನ ನಂ.1 ಆಟಗಾರನಾಗಿರುವ ಸೂರ್ಯಕುಮಾರ್ ಯಾದವ್ ಮೇಲೆ ತಂಡ ಹೆಚ್ಚಿನ ನಂಬಿಕೆ ಇರಿಸಿದೆ. ಕಳೆದ ಟಿ20 ವಿಶ್ವ ಕಪ್ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಕಾರಣ ತಂಡ ಸೆಮಿಫೈನಲ್ಗೇರುವಲ್ಲಿ ಯಶಸ್ವಿಯಾಗಿತ್ತು. ಇದೀಗ ಈ ಸರಣಿಯಲ್ಲೂ ಅವರ ಬ್ಯಾಟಿಂಗ್ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. ಇನ್ನು ರಿಷಭ್ ಪಂತ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದಿದಲ್ಲಿ ಅವರ ಸ್ಥಾನಕ್ಕೆ ಕುತ್ತು ಬರುವುದು ಗ್ಯಾರಂಟಿ. ಒಂದೊಮ್ಮೆ ಸಂಜು ಸ್ಯಾಮ್ಸನ್ ಈ ಸರಣಿಯಲ್ಲಿ ಉತ್ತಮವಾಗಿ ಆಡಿದರೆ ಅವರು ತಂಡದಲ್ಲಿ ಖಾಯಂ ಸ್ಥಾನ ಪಡೆಯಬಹುದು. ಸಂಜು ಕೀಪರ್ ಕೂಡ ಆದ ಕಾರಣ ಪಂತ್ ಅವರನ್ನು ಕೈಬಿಡುವ ಸಾಧ್ಯತೆಯೂ ಇರುವುದರಿಂದ ಪಂತ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಬೇಕಿದೆ.
ಕಿವೀಸ್ ಅನುಭವಿ ತಂಡ
ಭಾರತ ತಂಡಕ್ಕೆ ಹೋಲಿಸಿದರೆ ಕೇನ್ ವಿಲಿಯಮ್ಸನ್ ಪಡೆ ಅನುಭವಿ ಆಟಗಾರರಿಂದಲೇ ಕೂಡಿದ್ದು ಬಲಿಷ್ಠವಾಗಿ ಗೋಚರಿಸಿದೆ. ಜತೆಗೆ ತವರಿನ ಲಾಭವೂ ಇದೆ. ಟಿ20 ವಿಶ್ವ ಕಪ್ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಫಿನ್ ಅಲೆನ್, ಗ್ಲೇನ್ ಫಿಲಿಪ್ಸ್ ಮತ್ತು ಡೆವೋನ್ ಕಾನ್ವೆ ಬ್ಯಾಟಿಂಗ್ ಬಲವಾದರೆ ಬೌಲಿಂಗ್ನಲ್ಲಿ ಟಿಮ್ ಸೌಥಿ, ಲ್ಯಾಕಿ ಫರ್ಗ್ಯುಸನ್, ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ನಲ್ಲಿ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.
ಇದನ್ನೂ ಓದಿ | IND VS NZ | ವೆಲ್ಲಿಂಗ್ಟನ್ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಟಿ20 ಸಾಧನೆ ಹೇಗಿದೆ?