ಮೌಂಟ್ ಮಾಂಗ್ನುಯಿ: ಬುಹುನಿರೀಕ್ಷಿತ ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ ದ್ವಿತೀಯ ಪಂದ್ಯ ಮೌಂಟ್ ಮಾಂಗ್ನುಯಿ ಬೇ ಓವಲ್ ಮೈದಾನದಲ್ಲಿ ಭಾನುವಾರ ನಡೆಯಲಿದೆ. ವೆಲ್ಲಿಂಗ್ಟನ್ನಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡು ನಿರಾಸೆಯಲ್ಲಿದ್ದ ಉಭಯ ತಂಡದ ಆಟಗಾರರು ಇಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಈ ಪಂದ್ಯಕ್ಕೂ ಮಳೆ ಭೀತಿ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಸಂಪೂರ್ಣ ಯುವ ಪಡೆಯನ್ನು ಹೊಂದಿರುವ ಟೀಮ್ ಇಂಡಿಯಾ ಹೊಸ ಹುರುಪಿನಿಂದ ಕೂಡಿದ್ದು, ಮುಂಬರುವ 2024ರ ಟಿ20 ವಿಶ್ವ ಕಪ್ ದೃಷ್ಟಿಯಿಂದ ಈಗಿನಿಂದಲೇ ಒಂದೊಂದೇ ಗೆಲುವಿನ ಹೆಜ್ಜೆಯನ್ನಿಡಲು ಸಜ್ಜಾಗಿದೆ. ಮತ್ತೊಂದೆಡೆ ಅನುಭವಿ ಆಟಗಾರರನ್ನೇ ನೆಚ್ಚಿಕೊಂಡಿರುವ ಕೇನ್ ವಿಲಿಯಮ್ಸನ್ ಸಾರಥ್ಯದ ನ್ಯೂಜಿಲ್ಯಾಂಡ್ ತವರಿನಲ್ಲಿ ಗೆಲ್ಲುವ ಫೇವರಿಟ್ ಆಗಿದೆ.
ಸಿಡಿಯ ಬೇಕಿದೆ ರಿಷಭ್ ಪಂತ್
ಯುವ ಆಟಗಾರ ರಿಷಭ್ ಪಂತ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ಕಳೆದ ವಿಶ್ವ ಕಪ್ ಸರಣಿಯಲ್ಲಿ ಆರಂಭದಲ್ಲಿ ಅವಕಾಶ ಸಿಗದಿದ್ದರೂ ಬಳಿಕ ಸಿಕ್ಕ ಅವಕಾಶದಲ್ಲಿ ಪಂತ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಇದೀಗ ಕಿವೀಸ್ ಸರಣಿಯಲ್ಲಿಯೂ ಪಂತ್ ಎಡವಿದರೆ ಅವರ ಸ್ಥಾನಕ್ಕೆ ಕುತ್ತು ಬರುವುದು ಗ್ಯಾರಂಟಿ. ಏಕೆಂದರೆ ತಂಡದಲ್ಲಿ ಈಗಾಗಲೇ ಸ್ಪರ್ಧೆ ಏರ್ಪಟ್ಟಿದ್ದು ಒಂದೊಮ್ಮೆ ಸಂಜು ಸ್ಯಾಮ್ಸನ್ ಈ ಸರಣಿಯಲ್ಲಿ ಉತ್ತಮವಾಗಿ ಆಡಿದರೆ ಅವರು ತಂಡದಲ್ಲಿ ಖಾಯಂ ಸ್ಥಾನ ಪಡೆಯಬಹುದು. ಸಂಜು ಕೀಪರ್ ಕೂಡ ಆದ ಕಾರಣ ಪಂತ್ ಅವರನ್ನು ಕೈಬಿಡುವ ಸಾಧ್ಯತೆಯೂ ಇರುವುದರಿಂದ ಪಂತ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಬೇಕಿದೆ. ಉಳಿದಂತೆ ಸೂರ್ಯ ಕುಮಾರ್ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. ಕಳೆದ ವಿಶ್ವ ಕಪ್ ಟೂರ್ನಿಯಲ್ಲಿಯೂ ಅವರು ಶ್ರೇಷ್ಠ ಮಟ್ಟದ ಆಟ ಪ್ರದರ್ಶಿಸಿದ್ದರು. ಈ ನಿಟ್ಟಿನಲ್ಲಿ ಅವರ ಬ್ಯಾಟಿಂಗ್ ಮೇಲೆ ತಂಡ ಭರವಸೆ ಇರಿಸಿದೆ.
ಕಿವೀಸ್ ಬಲಿಷ್ಠ ತಂಡ
ಕೇನ್ ವಿಲಿಯಮ್ಸನ್ ಪಡೆ ಅನುಭವಿ ಆಟಗಾರರಿಂದಲೇ ಕೂಡಿದ್ದು ಹೆಚ್ಚು ಬಲಿಷ್ಠವಾಗಿ ಗೋಚರಿಸಿದೆ. ಜತೆಗೆ ತವರಿನ ಲಾಭವೂ ಇದೆ. ಟಿ20 ವಿಶ್ವ ಕಪ್ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಫಿನ್ ಅಲೆನ್, ಗ್ಲೇನ್ ಫಿಲಿಪ್ಸ್ ಮತ್ತು ಡೆವೋನ್ ಕಾನ್ವೆ ಬ್ಯಾಟಿಂಗ್ ಬಲವಾದರೆ ಬೌಲಿಂಗ್ನಲ್ಲಿ ಟಿಮ್ ಸೌಥಿ, ಲ್ಯಾಕಿ ಫರ್ಗ್ಯುಸನ್, ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ನಲ್ಲಿ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಇವರ ಸವಾಲನ್ನು ಯಂಗ್ ಟೀಮ್ ಇಂಡಿಯಾ ಮೆಟ್ಟಿನಿಂತೀತೇ ಎಂಬುವುದನ್ನು ಕಾದು ನೋಡಬೇಕಿದೆ.
ಫಿಚ್ ರಿಪೋರ್ಟ್
ಮೌಂಟ್ ಮೌಂನಿಯ ಬೇ ಓವಲ್ ಮೈದಾನವು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ಹೊಡಿ ಬಡಿ ಆಟಗಾರರಿಗೆ ಹೇಳಿ ಮಾಡಿಸಿದಂತಿದೆ. ಇನ್ನು ಈ ಗ್ರೌಂಡ್‌ನಲ್ಲಿ ಚಿಕ್ಕದಾದ ಬೌಂಡರಿ ಇರುವುದರಿಂದ ಬೌಲರ್ಗಳಿಗೆ ದೊಡ್ಡ ಸವಾಲಾಗಿದೆ. ಒಂದು ಸಣ್ಣ ತಪ್ಪು ಮಾಡಿದರು ಚೆಂಡು ಕ್ಷಣಾರ್ದದಲ್ಲಿ ಬೌಂಡರಿ ಗೆರೆ ದಾಟಲಿದೆ. ಅದರಲ್ಲೂ ಪ್ರಮುಖವಾಗಿ ಸ್ಪಿನ್ನರ್‌ಗಳಿಗೆ ಈ ಪಿಚ್ ದೊಡ್ಡ ಸವಾಲಾನಿಂದ ಕೂಡಿದೆ.
ಸಂಭಾವ್ಯ ತಂಡ
ಭಾರತ ತಂಡ
ಇಶಾನ್ ಕಿಶನ್, ಶುಬ್ಮಮನ್ ಗಿಲ್, ಶ್ರೇಯಸ್ ಅಯ್ಯರ್/ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅರ್ಶ್ದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್. ಭುವನೇಶ್ವರ್ ಕುಮಾರ್.
ನ್ಯೂಜಿಲೆಂಡ್:
ಫಿನ್ ಅಲೆನ್, ಡೆವೋನ್ ಕಾನ್ವೆ, ಕೇನ್ ವಿಲಿಯಮ್ಸನ್, ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಲಾಕಿ ಫರ್ಗ್ಯುಸನ್, ಆಡಂ ಮಿಲ್ನೆ. ಐಶ್ ಸೋಧಿ.
ಪಂದ್ಯ ಆರಂಭ: ಮಧ್ಯಾಹ್ನ: 12.00
ಇದನ್ನೂ ಓದಿ | IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯವೂ ಅನುಮಾನ