ಮುಂಬಯಿ: ಬುಧವಾರ ನಡೆದ ವಿಶ್ವಕಪ್ನ(India vs New Zealand, 1st Semi-Final) ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ನ್ಯೂಜಿಲ್ಯಾಂಡ್(IND vs NZ) ವಿರುದ್ಧ 70 ರನ್ಗಳ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ನವೆಂಬರ್ 19ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಇಂದು ನಡೆಯುವ ಆಸೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯದ ವಿಜೇತರನ್ನು ಭಾರತ ಫೈನಲ್ನಲ್ಲಿ ಎದುರಿಸಲಿದೆ.
ಸೋಲಿನ ಬಳಿಕ ಮಾತನಾಡಿದ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಭಾರತ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವ ಅರ್ಹ ತಂಡ ಎಂದು ಹೇಳಿದ್ದಾರೆ. ‘ಭಾರತ ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ತಂಡಕ್ಕೆ ಅಭಿನಂದನೆಗಳು. ನಾವು ಗೆಲ್ಲದಿದ್ದರೂ ತಂಡದ ಆಟಗಾರರು ಉತ್ತಮ ಆಟವಾಡಿದ್ದಾರೆ” ಎಂದರು.
“ಭಾರತ ಟೂನಿಉರ್ಯುದ್ದಕ್ಕೂ ಉತ್ತಮ ಕ್ರಿಕೆಟ್ ಆಡುತ್ತಲೇ ಬಂದಿದೆ. ನಾಕೌಟ್ ಹಂತಗಳಲ್ಲಿ ನಿರ್ಗಮಿಸಿರುವುದು ನಿರಾಸೆ ತಂದಿದೆ. ಪ್ರತಿ ಬಾರಿ ನಾವು ಭಾರತವನ್ನು ಸೋಲಿಸುತ್ತಿದ್ದವು, ಆದರೆ ಈ ಬಾರಿ ಅವರು ನಮ್ಮನ್ನು ಸೋಲಿಸಿದ್ದಾರೆ. ನಾವು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ಆದರೆ ಅದೃಷ್ಟ ನಮ್ಮ ಪರ ಇರಲಿಲ್ಲ. ಪಂದ್ಯದಲ್ಲಿ ಸೋಲು ಗೆಲುವು ಎಲ್ಲವನ್ನು ಸಮಾನವಾಗಿ ಪರಿಗಣಿಸಿ ಮುಂದಿನ ಟೂರ್ನಿಗಳ ಬಗ್ಗೆ ಚಿಂತಿಸಬೇಕಿದೆ” ಎಂದು ವಿಲಿಯಮ್ಸನ್ ಹೇಳಿದರು.
ರಚಿನ್ ಉತ್ತಮ ಪ್ರದರ್ಶನ
ಅಂತಾರಾಷ್ಟ್ರೀಯ ಪಂದ್ಯಗಳನ್ನು ಹೆಚ್ಚಾಗಿ ಆಡಿದ ಅನುಭವ ಇರದೇ ಇದ್ದ ರಚಿನ್ ರವೀಂದ್ರ ಅವರ ಪ್ರದರ್ಶನವನ್ನು ನಾವು ಮೆಚ್ಚಲೇ ಬೇಕು. ಅವರು ನಮಗಿಂತ ಉತ್ತಮವಾಗಿ ಟೂರ್ನಿಯುದ್ದಕ್ಕೂ ಕ್ರಿಕೆಟ್ ಆಡಿದ್ದಾರೆ. ಕಿವೀಸ್ ತಂಡದ ಭವಿಷ್ಯದ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳುವ ಮೂಲಕ ರಚಿನ್ ರವೀಂದ್ರ ಅವರ ಪ್ರದರ್ಶನಕ್ಕೆ ವಿಲಿಯಮ್ಸನ್ ಮೆಚ್ಚುಗೆ ಸೂಚಿಸಿದರು.
ಇದನ್ನೂ ಓದಿ IND vs NZ : ಟೀಮ್ ಇಂಡಿಯಾ ಸಾಧನೆಗೆ ಮೋದಿ ಏನಂದ್ರು? ರಾಹುಲ್ ಟ್ವೀಟ್ನಲ್ಲಿ ಏನಿದೆ?
ಪಂದ್ಯ ಗೆದ್ದ ಭಾರತ
ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 397 ರನ್ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ತಂಡ 48.5 ಓವರ್ಗಳ ಮುಕ್ತಾಯಗೊಂಡಾಗ 327 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಅಂದ ಹಾಗೆ ಭಾರತ ತಂಡ ಹಾಲಿ ವಿಶ್ವ ಕಪ್ನಲ್ಲಿ ಯಾವುದೇ ತಂಡಕ್ಕೆ 50 ಓವರ್ಗಳನ್ನು ಪೂರ್ತಿಯಾಗಿ ಆಡಲು ಬಿಡಲಿಲ್ಲ. ಇದು ಕೂಡ ಭಾರತ ತಂಡದ ಪಾಲಿಗೆ ದಾಖಲೆಯಾಗಿದೆ.
ದೊಡ್ಡ ಮೊತ್ತವನ್ನು ಪೇರಿಸಲು ಹೊರಟ ನ್ಯೂಜಿಲ್ಯಾಂಡ್ ತಂಡಕ್ಕೆ ನಿಜವಾಗಿಯೂ ಕಾಡಿದ್ದು ಮೊಹಮ್ಮದ್ ಶಮಿ. 9.5 ಓವರ್ಗಳನ್ನು ಎಸೆದ ಶಮಿ 57 ರನ್ ನೀಡಿ 7 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿಗೆ ಕಾರಣರಾದರು. ನ್ಯೂಜಿಲ್ಯಾಂಡ್ ಪರ ಡ್ಯಾರಿಲ್ ಮಿಚೆಲ್ 134 ರನ್ ಬಾರಿಸಿ ಮಿಂಚಿದರು. ಕೇನ್ ವಿಲಿಯಮ್ಸನ್ 69 ರನ್ ಬಾರಿಸಿದರು. ಇವರಿಬ್ಬರೂ 181 ರನ್ಗಳ ಜತೆಯಾಟವಾಡಿದರು. ಈ ವೇಳೆ ಭಾರತಕ್ಕೆ ಆತಂಕ ಎದುರಾಯಿತು. ಆದರೆ, ಶಮಿ ಅವರಿಬ್ಬರನ್ನೂ ಔಟ್ ಮಾಡುವ ಮೂಲಕ ಭಾರತಕ್ಕೆ ನೆಮ್ಮದಿ ತಂದರು. ನ್ಯೂಜಿಲ್ಯಾಂಡ್ ತಂಡದ ಗ್ಲೆನ್ ಫಿಲಿಫ್ಸ್ 41 ರನ್ ಬಾರಿಸಿದರು. ಉಳಿದವರಿಗೆ ದೊಡ್ಡ ಮೊತ್ತಕ್ಕೆ ಸವಾಲಾಗಲು ಸಾಧ್ಯವಾಗಲಿಲ್ಲ.