Site icon Vistara News

IND vs PAK: ಇಂಡೋ-ಪಾಕ್​ ಪಂದ್ಯದ 10 ಸೆಕೆಂಡ್​ ಜಾಹೀರಾತಿನ ಮೌಲ್ಯ ಕೇಳಿದರೆ ಅಚ್ಚರಿ ಖಚಿತ

India vs Pakistan

ಅಹಮದಾಬಾದ್​: ಭಾರತ ಮತ್ತು ಪಾಕಿಸ್ತಾನ(IND vs PAK) ನಡುವೆ ನಡೆಯುವ ವಿಶ್ವಕಪ್​ ಪಂದ್ಯದ ವೇಳೆ ಪ್ರಸಾರಗೊಳ್ಳುವ ಜಾಹೀರಾತಿನ ಮೌಲ್ಯ ಕೇಳಿ ಎಲ್ಲರ ಅಚ್ಚರಿ ಪಟ್ಟಿದ್ದಾರೆ. ಪ್ರತಿ 10 ಸೆಕೆಂಡ್ ಜಾಹೀರಾತಿಗೆ ಬರೋಬ್ಬರಿ 30 ಲಕ್ಷ ನಿಗದಿಯಾಗಿದೆ ಎಂದು ವರದಿಯಾಗಿದೆ.

ಟೂರ್ನಿಯ ಪ್ರಸಾರಕರಾದ ಡಿಸ್ನಿ ಸ್ಟಾರ್‌ ಸಂಸ್ಥೆಯು ಈ ಪಂದ್ಯದ ಸಂಪೂರ್ಣ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ. ಪಂದ್ಯದ ವೇಳೆ ಪ್ರಸಾರಗೊಳ್ಳುವ ಪ್ರತಿ 10 ಸೆಕೆಂಡ್ ಜಾಹೀರಾತಿಗೆ ಬರೋಬ್ಬರಿ 30 ಲಕ್ಷ ನಿಗದಿಪಡಿಸಿದೆ ಎನ್ನಲಾಗಿದೆ. ಭಾರತದ ಇತರ ಪಂದ್ಯಗಳ ವೇಳೆ 10 ಸೆಕೆಂಡ್‌ ಜಾಹೀರಾತಿನ ಸ್ಲಾಟ್‌ಗಳನ್ನು ಅಂದಾಜು 10 ಲಕ್ಷಗೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಆರಂಭಿಕ ಹಂತದಲ್ಲಿ ಉಭಯ ತಂಡಗಳ ಈ ಪಂದ್ಯದ ವೇಳೆ ಪ್ರತಿ 10 ಸೆಕೆಂಡ್ ಜಾಹೀರಾತಿಗೆ 17ರಿಂದ 18 ಲಕ್ಷ ಮೊತ್ತವನ್ನು ನಿಗದಿ ಪಡಿಸಲಾಗಿತ್ತು. ಆದರೆ ಪಂದ್ಯದ ಬೇಡಿಕೆ ಹೆಚ್ಚಾದದ್ದನ್ನು ಕಂಡ ಡಿಸ್ನಿ ಸ್ಟಾರ್‌ ಸಂಸ್ಥೆಯು ಇದರ ಸಂಪೂರ್ಣ ಲಾಭವೆತ್ತಲು ಮೌಲ್ಯವನ್ನು 30 ಲಕ್ಷಕ್ಕೆ ಏರಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ IND vs PAK: ಪಾಕಿಸ್ತಾನ ಪಂದ್ಯದಿಂದ ಹೊರಬಿದ್ದ ಇಶಾನ್​ ಕಿಶನ್​; ಕಾರಣ ಏನು?

ಹೋಟೆಲ್‌ ದರ 1 ಲಕ್ಷ ರೂ.

ಈಗಾಗಲೇ ಈ ಪಂದ್ಯವನ್ನು ಕಣ್ತುಂಬಿಕೊಳ್ಳುವ ನಿಟ್ಟಿನಲ್ಲಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಅಹಮದಾಬಾದ್​ನ ಬಹುತೇಕ ಹೋಟೆಲ್​ಗಳು ಬುಕ್​ ಆಗಿವೆ. ಕೆಲವು ಹೋಟೆಲ್‌ಗಳು ಈಗಾಗಲೇ ಸುಮಾರು 1 ಲಕ್ಷ ರೂ.ಗಳನ್ನು ವಿಧಿಸಿತ್ತು. ಆದರೂ ಹೆಚ್ಚಿನವು ಈಗಾಗಲೇ ಬುಕ್ಕಿಂಗ್​ ಕೂಡ ಆಗಿದೆ ಎಂದು ವರದಿಯಾಗಿದೆ. ಸಾಮಾನ್ಯ ದಿನಗಳಲ್ಲಿ ನಗರದ ಐಷಾರಾಮಿ ಹೋಟೆಲ್‌ಗಳ ದರ 5ರಿಂದ 8 ಸಾವಿರ ಇರುತ್ತದೆ. ಆದರೆ ಭಾರತ ಮತ್ತು ಪಾಕ್​ ಪಂದ್ಯ ನಡೆಯುವ ದಿನದಂದು ದರ 40,000 ರೂ.ಗೆ ಜಿಗಿದಿದೆ. ಆದರೂ ಕಡಿಮೆ ಖರ್ಚಿನ ಹೋಟೆಲ್​ಗಳು ಲಭ್ಯವಿದೆ ಎಂದು ತಿಳಿದುಬಂದಿದೆ.

ಪೂರ್ವ ನಿಗದಿಯಂತೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ಪಂದ್ಯ ಅಕ್ಟೋಬರ್ 15ರಂದು ನಡೆಯಬೇಕಿತ್ತು. ಆದರೆ ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ನವರಾತ್ರಿ ಸಂಭ್ರಮಾಚರಣೆ ಆರಂಭಗೊಳ್ಳಲಿರುವ ಕಾರಣ ಭದ್ರತಾ ಸಮಸ್ಯೆ ಎದುರಾಗಬಹುದು ಎಂದು ಭದ್ರತಾ ಏಜೆನ್ಸಿಗಳು ಸಲಹೆ ನೀಡಿತ್ತು. ಈ ಕಾರಣದಿಂದ ಪಂದ್ಯದ ದಿನಾಂಕವನ್ನು ಬದಲಿಸಿ ಅಕ್ಟೋಬರ್​ 14ಕ್ಕೆ ನಿಗದಿ ಮಾಡಲಾಯಿತು.

ಇದನ್ನೂ ಓದಿ IND vs PAK: ಭಾರತ-ಪಾಕ್​ ಪಂದ್ಯ ನಡೆಯುವುದು ಅನುಮಾನ

ಮೈದಾನದ ಸುತ್ತ ಕಟ್ಟೆಚ್ಚರ

ಪಂದ್ಯ ನಡೆಯುವ ಮೋದಿ ಕ್ರಿಕೆಟ್‌ ಸ್ಟೇಡಿಯಂ(narendra modi stadium) ಮೇಲೆ ದಾಳಿ ನಡೆಸುವುದಾಗಿ ಈಗಾಗಲೇ ಕೆಲವು ಅನಾಮಿಕ ಕರೆಗಳು ಕೂಡ ಬಂದಿವೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬೆದರಿಕೆ ಹಾಕಿದ್ದ ಎನ್ನಲಾಗಿರುವ ವ್ಯಕ್ತಿಯನ್ನು ಅಹಮದಾಬಾದ್​ನ ಅಪರಾಧ ಪತ್ತೆ ದಳ ಬಂಧಿಸಿದೆ. ಈತ ತನ್ನ ಮೊಬೈಲ್‌ನಿಂದ ಬೆದರಿಕೆ ಇ-ಮೇಲ್‌ ಕಳುಹಿಸಿದ್ದ. ಆದರೆ ಈ ವ್ಯಕ್ತಿ ಯಾವುದೇ ಅಪರಾಧ ಹಿನ್ನೆಲೆಯನ್ನು ಹೊಂದಿಲ್ಲ. ಈತ ಮೂಲತಃ ಮಧ್ಯಪ್ರದೇಶದನಾಗಿದ್ದು ಗುಜರಾತ್‌ನ ರಾಜ್‌ಕೋಟ್‌ ಹೊರವಲಯದಲ್ಲಿ ವಾಸಿಸುತ್ತಿದ್ದ. ಸದ್ಯಕ್ಕೆ ಈತ ಪೊಲೀಸ್​ ಕಸ್ಟಡಿಯಲ್ಲಿದ್ದಾನೆ.

ಪಾಕಿಸ್ತಾನ ತಂಡ 7 ವರ್ಷಗಳ ಬಳಿಕ ಭಾರತಕ್ಕೆ ಕಾಲಿಟ್ಟಿದೆ. ಇದಕ್ಕೂ ಮುನ್ನ 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಡಲು ಕೊನೆಯ ಬಾರಿ ಪಾಕ್​ ತಂಡ ಭಾರತಕ್ಕೆ ಬಂದಿತ್ತು. ಮುಂಬಯಿ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಡುವುದನ್ನು ನಿಲ್ಲಿಸಿದೆ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

Exit mobile version