ಕೊಲಂಬೋ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಏಷ್ಯಾಕಪ್(Asia Cup 2023) ಟೂರ್ನಿಯಿಂದ ದಿಢೀರ್ ತವರಿಗೆ ತೆರಳಿದ್ದ ಜಸ್ಪ್ರೀತ್ ಬುಮ್ರಾ(Jasprit Bumrah) ಅವರು ಮತ್ತೆ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಭಾನುವಾರ ನಡೆಯುವ ಪಾಕಿಸ್ತಾನ(IND vs PAK) ವಿರುದ್ಧದ ಪಂದ್ಯಕ್ಕೆ ಅವರು ಲಭ್ಯರಿದ್ದಾರೆ ಎಂದು ಬಿಸಿಸಿಐ(BCCI) ಖಚಿತಪಡಿಸಿದೆ. ಆದರೆ ಈ ಪಂದ್ಯ ಮಳೆಯಿಂದಾಗಿ ನಡೆಯುವುದೇ ಅನುಮಾನ ಎನ್ನಲಾಗಿದೆ.
ಒಳಾಂಗಣದಲ್ಲಿ ಅಭ್ಯಾಸ
ಗುರುವಾರ ಕೊಲಂಬೋದಲ್ಲಿ ಭಾರಿ ಮಳೆ ಸುರಿದಿತ್ತು. ಮೈದಾನವನ್ನು ಸಂಪೂರ್ಣವಾಗಿ ಕವರ್ನಿಂದ ಮುಚ್ಚಲಾಗಿತ್ತು. ಹೀಗಾಗಿ ಭಾರತ ತಂಡದ ಆಟಗಾರರು ಒಳಾಂಗಣ ಅಭ್ಯಾಸ ಮಾತ್ರ ನಡೆಸಿದ್ದರು. ಕೇವಲ ಜಿಮ್ನಲ್ಲಿ ವ್ಯಾಯಾಮ ನಡೆಸಿದ್ದರು. ಭಾರತ ಮತ್ತು ಪಾಕ್ ನಡುವೆ ಭಾನುವಾರ ನಡೆಯಲಿರುವ ಪಂದ್ಯಕ್ಕೆ ಶೇ.90ರಷ್ಟು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ಮೋಡ ಕವಿದ ವಾತಾರಣ ಇರಲಿದ್ದು ಸರಿಯಾದ ಬೆಳಕಿನ ಅಭಾವ ಕೂಡ ಕಾಡಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಹೀಗಾಗಿ ಬ್ಯಾಡ್ ಲೈಟ್ ಎಂದು ಅಂಪಾಯರ್ ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಲೂಬಹುದು.
ರಾಹುಲ್ಗೆ ಅವಕಾಶ
ಸಂಪೂರ್ಣ ಫಿಟ್ ಆಗದ ಕಾರಣ ಏಷ್ಯಾಕಪ್ನ(Asia Cup 2023) ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಕನ್ನಡಿಗ ಕೆ.ಎಲ್. ರಾಹುಲ್(KL Rahul) ಅವರು ಈಗ ಫುಲ್ ಫಿಟ್ ಆಗಿದ್ದಾರೆ. ಹೀಗಾಗಿ ಅವರು ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಆದರೆ ರಾಹುಲ್ ಅವಕಾಶ ಪಡೆದರೆ ಯಾರನ್ನು ಕೈಬಿಡುವುದು ಎನ್ನುವುದು ಪ್ರಮುಖ ಪ್ರಶ್ನೆ.
ರಾಹುಲ್ ಬದಲಿಗೆ ಪಾಕ್ ವಿರುದ್ಧದ ಮೊದಲ ಮುಖಾಮುಖಿಯಲ್ಲಿ ಆಡಿದ್ದ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ನಿರ್ವಹಣೆ ತೋರಿ ತಂಡಕ್ಕೆ ನೆರವಾಗಿದ್ದರು. ಒಂದೊಮ್ಮೆ ಇಶಾನ್ ಕಿಶನ್ ಆಡದೇ ಹೋಗಿದ್ದರೆ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಾಣುವ ಭೀತಿಗೆ ಸಿಲುಕ್ಕಿತ್ತು. ಹೀಗಾಗಿ ಕಿಶನ್ ಅವರನ್ನು ಕೈಬಿಡುವುದು ಕಷ್ಟವೆನಿಸಿದೆ. ಇದಕ್ಕಾಗಿ ಬದಲಿ ಮಾರ್ಗ ಹುಡುಕಿರುವ ಆಯ್ಕೆ ಸಮಿತಿ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟು ಕೆ.ಎಲ್ ರಾಹುಲ್ರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸುವ ಚಿಂತನೆ ನಡೆಸಿದೆ.
ಇದನ್ನೂ ಓದಿ Asia Cup 2023: ಕೊಲಂಬೋದಲ್ಲಿ ಭಾರಿ ಮಳೆ; ಭಾರತ-ಪಾಕ್ ಪಂದ್ಯಕ್ಕೂ ಎಚ್ಚರಿಕೆಯ ಕರೆ ಗಂಟೆ!
ಶಾರ್ದೂಲ್ ಅನುಮಾನ
ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ ಕಾರಣ ಅವರ ಸ್ಥಾನದಲ್ಲಿ ನೇಪಾಳ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಮೊಹಮದ್ ಶಮಿ ಪಾಕ್ ವಿರುದ್ಧವೂ ಆಡುವ ಸಾಧ್ಯತೆ ಇದೆ. ಆಗ ಶಾರ್ದೂಲ್ ಅವರು ಬೆಂಚ್ ಕಾಯಬೇಕಾದಿತು. ಶಾರ್ದೂಲ್ ಆಡಿದ ಎರಡು ಪಂದ್ಯಗಳಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಹೀಗಾಗಿ ಶಮಿಗೆ ಅವಕಾಶ ಖಚಿತ ಎನ್ನಬಹುದು. ಉಳಿದಂತೆ ಹೆಚ್ಚಿನ ಬದಲಾವಣೆ ಸಂಭವಿಸುವು ಕಷ್ಟ.