ಮೆಲ್ಬೋರ್ನ್: ಐಸಿಸಿ ಟಿ20 ವಿಶ್ವ ಕಪ್‌ನಲ್ಲಿ ಪಾಕಿಸ್ತಾನ (IND VS PAK) ವಿರುದ್ಧದ ಭಾನುವಾರ ನಡೆದ ರೋಚಕ ಹಣಾಹಣಿಯಲ್ಲಿ ಭಾರತ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಭಾರತದಲ್ಲಿ ದೀಪಾವಳಿ ಸಂಭ್ರಮ ಇನ್ನೂ ಹೆಚ್ಚಾಗಿದೆ. ಸಾಂಪ್ರದಾಯಿಕ ಎದುರಾಳಿ ವಿರುದ್ಧ ಸೋಲಿನ ಸುಳಿಗೆ ಸಿಲುಕಿದ್ದ ಭಾರತ ತಂಡ ಗೆಲುವಿನ ದಡ ಸೇರಿದ್ದೇ ತಡ ಇತ್ತ ಭಾರತದಲ್ಲಿ ಒಂದು ದಿನ ಮುಂಚಿತವಾಗಿಯೇ ದೀಪಾವಳಿ ಆರಂಭವಾಗಿದೆ. ಅಭಿಮಾನಿಗಳು ದೇಶದೆಲ್ಲೆಡೆ ಪಟಾಕಿ ಹಚ್ಚಿ ಈ ಗೆಲುವನ್ನು ಸಂಭ್ರಮಿಸಿದ್ದಾರೆ. ಎಲ್ಲದಕ್ಕಿಂತ ಮಿಗಿಲಾಗಿ ಕಾಶ್ಮೀರದಲ್ಲೂ ಸಂಭ್ರಮಾಚರಣೆ ನಡೆದಿದೆ.
ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೫೯ ರನ್ ಬಾರಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಭಾರತ ತಂಡ ೨೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೬೦ ರನ್ ಬಾರಿಸಿ ಜಯ ಕಂಡಿತು.
ಭಾರತ ಗೆಲುವು ಸಾಧಿಸುತ್ತಿದ್ದಂತೆ ದೇಶದ ವಿವಿಧೆಡೆ ಬೈಕ್ ರ‍್ಯಾಲಿ, ಭಾರತದ ರಾಷ್ಟ್ರ ಧ್ವಜಗಳನ್ನು ಹಿಡಿದು ಕೊಹ್ಲಿ ಇಸ್ ಕಿಂಗ್ ಎಂಬ ಘೋಷಣೆಗಳನ್ನು ಮೊಳಗಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಅದರಂತೆ ಕಾಶ್ಮೀರದಲ್ಲೂ ಭಾರತ ತಂಡದ ಗೆಲುವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನೂ ಕೆಲವು ಕಡೆ ಜನರು ಟ್ರಾಫಿಕ್ ಸಿಗ್ನಲ್ ಬಳಿಯ ಅಂಗಡಿಗಳ ಮಂದೆ ನಿಂತು ಈ ರೋಚಕ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ. ದೇಶಾದ್ಯಂತ ಸಂಭ್ರಮಿಸಿದ ಕೆಲ ಆಕರ್ಷಕ ಗೆಲುವಿನ ಸಂಭ್ರಮವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | IND VS PAK | ಗೆಲುವಿನ ಬಳಿಕ ಕೊಹ್ಲಿಯನ್ನು ಭುಜದ ಮೇಲೆ ಹೊತ್ತು ಕುಣಿದಾಡಿದ ರೋಹಿತ್