ಲಾಹೋರ್: ಭಾರತದ ಆತಿಥ್ಯದಲ್ಲಿ ನಡೆಯುವ ಪ್ರತಿಷ್ಠಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ(ICC World Cup 2023) ಪಾಕಿಸ್ತಾನ(IND vs PAK) ತಂಡ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ಆಡಲು ಹಿಂದೇಟು ಹಾಕಿದೆ. ಅಹಮದಾಬಾದ್ ಬಿಟ್ಟು ಬೇರೆ ಯಾವುದೇ ತಾಣದಲ್ಲಾದರೂ ಪಂದ್ಯ ಆಡಲು ಸಿದ್ಧ ಇದು ಸಾಧ್ಯವಾಗದಿದ್ದರೆ ವಿಶ್ವ ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಾಕ್ ಕ್ರಿಕೆಟ್ ಮಂಡಳಿ ಈಗಾಗಲೇ ಐಸಿಸಿಗೂ ಮನವಿ ಮಾಡಿದೆ. ಇದೇ ಕಾರಣಕ್ಕೆ ವೇಳಾಪಟ್ಟಿ ಪ್ರಕಟ ಕೂಡ ವಿಳಂಬವಾಗಿದೆ.
ಪಾಕಿಸ್ತಾನ ತಂಡ ಅಹಮದಾಬಾದ್ನಲ್ಲಿ ಪಂದ್ಯ ಆಡಲು ನಿರಾಕರಿಸುತ್ತಿರುವ ಕುರಿತು ಮಾತನಾಡಿರುವ ಪಾಕ್ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ(shahid afridi), ಪಾಕ್ ಕ್ರಿಕೆಟ್ ಮಂಡಳಿಯ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. “ಅಹಮದಾಬಾದ್ ಪಿಚ್‌ಗಳಲ್ಲಿ ಆಡಲು ಪಾಕ್ ಏಕೆ ನಿರಾಕರಿಸುತ್ತಿದೆ? ಅಲ್ಲೇನು ದೆವ್ವವಿದೆಯೇ? ಹೋಗಿ ಆಟವಾಡಿ, ಗೆಲುವು ಸಾಧಿಸಿ. ನಮಗೆ ಮುಖ್ಯವಾದುದು ಭಾರತ ನೆಲದಲ್ಲಿ ಗೆಲುವು. ಇದು ಯಾವ ಮೈದಾನವಾದರೇನು. ಅದರಲ್ಲೂ ವಿಶ್ವದ ಅತಿ ದೊಡ್ಡ ಅಹಮದಾಬಾದ್ ಸ್ಟೇಡಿಯಂನಲ್ಲಿ ಗೆದ್ದರೆ ನಮ್ಮ ಸಾಮರ್ಥ್ಯ ಏನೆಂದು ತಿಳಿಯಲಿದೆ. ಅದು ಬಿಟ್ಟು ಮೊಂಡು ವಾದ ಮಾಡುವುದರಲ್ಲಿ ಅರ್ಥವಿಲ್ಲ” ಎಂದು ಹೇಳುವ ಮೂಲಕ ಪಾಕ್ ಮಂಡಳಿಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಇದನ್ನೂ ಓದಿ ICC World Cup 2023: ವಿಶ್ವ ಕಪ್ ವಿಚಾರದಲ್ಲಿ ಹೊಸ ಕ್ಯಾತೆ ತೆಗೆದ ಪಾಕಿಸ್ತಾನ
ಮೋದಿ ಹೆಸರಿನ ಈ ಸ್ಟೇಡಿಯಂನಲ್ಲಿ ಆಡದೆ ಈ ಮೂಲಕ ಪರೋಕ್ಷವಾಗಿ ಪ್ರಧಾನಿ ಮೋದಿ ಅವರಿಗೆ ಅವಮಾನ ಮಾಡುವುದು ಪಾಕ್ ಕುತಂತ್ರವಾಗಿದೆ. ಇದೇ ಕಾರಣಕ್ಕೆ ಇಲ್ಲಿ ಆಡಲು ಹಿಂದೇಟು ಹಾಕುತ್ತಿದೆ. ಜತೆಗೆ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಏಷ್ಯಾ ಕಪ್ನಲ್ಲಿ ಭಾರತ ಆಡಲು ನಿರಾಕರಿಸಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ನಡೆಸಲು ನಿರ್ಧರಿಸಿದ ಕೋಪವೂ ಪಾಕ್ ಮುಂದಿದೆ.
ಹೊಸ ಕ್ಯಾತೆ ತೆಗೆದ ನಜಾಮ್ ಸೇಥಿ
ವಿಶ್ವ ಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದರೂ ನಮ್ಮ ತಂಡ ಭಾರತದಲ್ಲಿ ಆಡಬೇಕೆ ಅಥವಾ ಬೇಡವೇ ಎಂದು ಸರ್ಕಾರ ನಿರ್ಧರಿಸಲಿದೆ ಎಂದು ಹೇಳುವ ಮೂಲಕ ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜಾಮ್ ಸೇಥಿ(Najam Sethi) ಹೊಸ ಕ್ಯಾತೆಯೊಂದನ್ನು ತೆಗೆದಿದ್ದಾರೆ.
“ಭಾರತ ಕ್ರಿಕೆಟ್ ತಂಡ (Indian Cricket Team) ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಅಥವಾ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಪ್ರವಾಸ ಮಾಡಲು ಪಿಸಿಬಿ ಅಥವಾ ಬಿಸಿಸಿಐ ತೀರ್ಮಾನ ಮಾಡುವುದಿಲ್ಲ. ಆಯಾ ದೇಶದ ಸರ್ಕಾರಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಹೀಗಾಗಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದರ ಮೇಲೆ ನಮ್ಮ ವಿಶ್ವ ಕಪ್ ಭವಿಷ್ಯ ಅಡಗಿದೆ” ಎಂದು ಹೇಳಿದ್ದಾರೆ.