ಕರಾಚಿ: ಭಾರತ ಮತ್ತು ಪಾಕಿಸ್ತಾನ(IND vs PaK) ನಡುವಿನ ಪಂದ್ಯ ಎಂದರೆ ಕೇವಲ ಎರಡು ದೇಶಗಳ ಕ್ರಿಕೆಟ್ ಅಭಿಮಾನಿಗಳ ನಡುವಿನ ಸಮರಕ್ಕೆ ಮಾತ್ರ ಸೀಮಿತವಾಹಿಲ್ಲ. ಫೀಲ್ಡ್ನಲ್ಲಿ ಆಡುವ ಇತ್ತಂಡಗಳ ಆಟಗಾರರ ಮಧ್ಯೆಯೂ ಸಮರಗಳು ನಡೆಯುತ್ತಲೇ ಇರುತ್ತದೆ. ಪರಸ್ಪರ ಗುದ್ದಾಟ, ವಾಗ್ವಾದ, ದೃಷ್ಟಿ ಯುದ್ಧ ಹೀಗೆ ಹಲವು ಘಟನೆಗಳು ನಡೆಯುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಈ ಪಂದ್ಯವನ್ನು ಹೈವೋಲ್ಟೇಜ್ ಎಂದು ಕರೆಯಲಾಗುತ್ತದೆ. 2013ರಲ್ಲಿ ನಡೆದ ಪಂದ್ಯವೊಂದರಲ್ಲಿ ನಡೆದ ಘಟನೆಯನ್ನು ಪಾಕ್ ಮಾಜಿ ಆಟಗಾರ ಕಮ್ರಾನ್ ಅಕ್ಮಲ್(Kamran Akmal) ಮೆಲುಕು ಹಾಕಿದ್ದಾರೆ.
ಕೆಟ್ಟ ಪದದಿಂದ ಬೈದ ಇಶಾಂತ್
ಪಾಕಿಸ್ತಾನ ತಂಡ ಭಾರತದ ನೆಲದಲ್ಲಿ ಕೊನೆಯ ಬಾರಿ ಏಕದಿನ ಮತ್ತು ಟಿ20 ಸರಣಿ ಆಡಿದ್ದು 2012-13ರಲ್ಲಿ, ಇದಾಗ ಬಳಿಕ ಉಭಯ ತಂಡಗಳು ತಮ್ಮ ತಮ್ಮ ದೇಶದಲ್ಲಿ ದ್ವಿಪಕ್ಷೀಯ ಸರಣಿ ಆಡಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಅಂದು ಭಾರತದಲ್ಲಿ ನಡೆದ ಟಿ20 ಸರಣಿಯಲ್ಲಿ ಇಶಾಂತ್ ಶರ್ಮ(Ishant Sharma) ಜತೆಗೆ ನಡೆದ ವಾಗ್ವಾದ ಘಟನೆಯೊಂದನ್ನು ಇದೀಗ ಕಮ್ರಾನ್ ಅಕ್ಮಲ್ ನೆನಪಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅಕ್ಮಲ್, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯ ಇದಾಗಿತ್ತು. ಬೌಲಿಂಗ್ ನಡೆಸುತ್ತಿದ್ದ ಇಶಾಂತ್ ಶರ್ಮ ನನ್ನ ವಿಕೆಟ್ ಕಿತ್ತ ಜೋಶ್ನಲ್ಲಿ ಕೆಟ್ಟ ಪದದಿಂದ ಬೈದರು ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡರು.
ಧೋನಿ,ರೈನಾಗೆ ಧನ್ಯವಾದ
ಇಶಾಂತ್ ಅವರು ವಿಕೆಟ್ ಕಿತ್ತ ಖುಷಿಯಲ್ಲಿ ನನಗೆ ಕೆಟ್ಟ ಪದದಿಂದ ಬೈದರು. ತಕ್ಷಣ ನಾನು ಕೂಡ ಇಶಾಂತ್ ಬಳಿ ವಾಗ್ವಾದಕ್ಕೆ ಮುಂದಾದೆ. ಇದೇ ವೇಳೆ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿ(MS Dhoni) ಮತ್ತು ಸುರೇಶ್ ರೈನಾ(suresh raina) ಅವರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅವರಿಗೂ ಇಶಾಂತ್ ಮಾಡಿದ ತಪ್ಪಿನ ಬಗ್ಗೆ ತಿಳಿದಿತ್ತು. ಹೀಗಾಗಿ ಧೋನಿ ಅವರು ಇಶಾಂತ್ಗೆ ಏನೋ ವಾರ್ನಿಂಗ್ ನೀಡಿ ಅಲ್ಲಿಂದ ಕಳುಹಿಸಿದರು, ಇದಕ್ಕಾಗಿ ನಾನು ಧೋನಿ ಮತ್ತು ರೈನಾಗೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದರು. ಕಮ್ರಾನ್ ಅವರು ಕೇವಲ ಒಂದು ರನ್ಗೆ ಇಶಾಂತ್ಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ ICC World Cup: ಈ ಆಟಗಾರ ತಂಡದಲ್ಲಿ ಇಲ್ಲದಿದ್ದರೆ ಭಾರತ ಪಾಕ್ ವಿರುದ್ಧ ಸೋಲುವುದು ಖಚಿತ; ಕೈಫ್
ನಾನು ಪ್ರಾಮಾಣಿಕನಾಗಿದ್ದೆ, ಇಶಾಂತ್ ಅವರೇ ತಪ್ಪು ಮಾಡಿದ್ದರು. ದ್ವಿತೀಯ ಪಂದ್ಯಕ್ಕೆ ಅಹಮದಾಬಾದ್ಗೆ ತೆರಳುವ ವೇಳೆ ವಿರಾಟ್ ಕೊಹ್ಲಿ, ಹಫೀಜ್ ಮತ್ತು ಮಲಿಕ್ ಅವರು ಈ ಘಟನೆ ಬಗ್ಗೆ ಕೇಳಿದರು. ಆಗ ಇಶಾಂತ್ ಅವರು ನಾನು ಕೆಟ್ಟ ಪದ ಬಳಕೆ ಮಾಡಿದ್ದು ನಿಜ ಎಂದು ಹೇಳಿದರು. ಇದು ಹೈವೋಲ್ಟೇಜ್ ಪಂದ್ಯದ ವೇಳೆ ಸಹಜ. ಆದರೆ ನಮ್ಮಿಬ್ಬರ ಮಧ್ಯೆ ಯಾವುದೇ ದ್ವೇಷವಿಲ್ಲ ಎಂದರು.
ಪಂದ್ಯ ಸೋತ ಭಾರತ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ಗೌತಮ್ ಗಂಭೀರ್(43) ಮತ್ತು ಅಜಿಂಕ್ಯ ರಹಾನೆ(42) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 133 ರನ್ ಗಳಿಸಿತು. ಸುಲಭ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಮೊಹಮ್ಮದ್ ಹಫೀಜ್(61) ಮತ್ತು ಶೋಯೆಬ್ ಮಲಿಕ್ ಅಜೇಯ(57) ಅರ್ಧಶತಕದ ನೆರವಿನಿಂದ 5 ವಿಕೆಟ್ಗೆ 134 ರನ್ ಗಳಿಸಿ 5 ವಿಕೆಟ್ಗಳ ಗೆಲುವು ಸಾಧಿಸಿತ್ತು.