ಕೊಲಂಬೊ: ಸಂಪೂರ್ಣ ಫಿಟ್ ಆಗದ ಕಾರಣ ಏಷ್ಯಾಕಪ್ನ(Asia Cup 2023) ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಕನ್ನಡಿಗ, ಸ್ಟಾರ್ ಆಟಗಾರ ಕೆ.ಎಲ್ ರಾಹುಲ್(kl rahul) ಅವರು ಭಾನುವಾರ ಪಾಕಿಸ್ತಾನ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಕಣಕ್ಕಿಳಿದರು. ಅವರ ಆಗಮನದಿಂದ ಎದುರಾಳಿ ಪಾಕ್ಗೆ ಭಯ ಕಾಡಿದೆ. ಒಂದು ಸಲ ರಾಹುಲ್ ಕ್ರೀಸ್ ಕಚ್ಚಿ ನಿಂತರೆ ಮತ್ತೆ ಅವರನ್ನು ತಡೆಯುವುದು ಕಷ್ಟದ ಮಾತು. ಸಿಕ್ಸರ್ ಬೌಂಡರಿಗಳ ಸುರಿಮಳೆ ಖಚಿತ.
ಕಳೆದ ಸುಮಾರು ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ರಾಹುಲ್ ಅವರು ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಲಿ ಎನ್ನುವುದು ಅವರ ಅಭಿಮಾನಿಗಳ ಆಶಯವಾಗಿದೆ. ಸದ್ಯಕ್ಕೆ ಭಾರತ ತಂಡದಲ್ಲಿ ಯಾವುದೇ ಕ್ರಮಾಂಕದಲ್ಲಿ ಆಡಬಲ್ಲ ಸಾಮರ್ಥ್ಯ ಇರುವುದು ಕೂಡ ರಾಹುಲ್ ಅವರಲ್ಲಿ ಮಾತ್ರ. ಈ ಮಾತನ್ನು ಈಗಾಗಲೇ ಟೀಮ್ ಇಂಡಿಯಾದ ಅನೇಕ ಮಾಜಿ ಆಟಗಾರರು ಸೇರಿ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಕೂಡ ಹೇಳಿದ್ದಾರೆ. ವಿಶ್ವಕಪ್ಗೆ ತಂಡ ಪ್ರಕಟಿಸುವ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅಗರ್ಕರ್, “ರಾಹುಲ್ ಉಪಸ್ಥಿತಿ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಅತ್ಯುತ್ತಮ ಸಮತೋಲನ ಒದಗಿಸಲಿದೆ.
ಐಪಿಎಲ್ ವೇಳೆ ಗಾಯಗೊಂಡಿದ್ದ ರಾಹುಲ್
31 ವರ್ಷದ ರಾಹುಲ್ ಮೇ 1ರಂದು ನಡೆದ ಆರ್ಸಿಬಿ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ರಾಹುಲ್ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಟಗಾರರ ಸಹಾಯದಿಂದ ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಗಿತ್ತು. ಗಾಯದ ಪ್ರಮಾಣ ಗಂಭಿರವಾದ ಪರಿಣಾಮ ಅವರಿಗೆ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹೀಗಾಗಿ ಅವರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು.
ಇದನ್ನೂ ಓದಿ IND vs PAK: ಭಾರತ-ಪಾಕ್ ಪಂದ್ಯ ಉಚಿತ ವೀಕ್ಷಣೆ ಸಾಧ್ಯ; ಈ ಆ್ಯಪ್ನಲ್ಲಿ ಪ್ರಸಾರ
ಟೀಕೆಗೆ ಉತ್ತರಿಸಬೇಕು ರಾಹುಲ್
ಗಾಯದಿಂದ ಚೇತರಿಕೆ ಕಂಡ ತಕ್ಷಣ ರಾಹುಲ್ ಹಿಂದಿನ ಫಾರ್ಮ್ಗೆ ಮರಳುವುದು ಕಷ್ಟ. ಹೀಗಾಗಿ ಅವರನ್ನು ಮಹತ್ವದ ಟೂರ್ನಿಯಲ್ಲಿ ಆಡಿಸುವ ಬದಲು ದ್ವಿಪಕ್ಷೀಯ ಸರಣಿಯಲ್ಲಿ ಆಡಿಸಿ ಬಳಿಕ ಮಹತ್ವದ ಟೂರ್ನಿಗೆ ಅವಕಾಶ ನೀಡಿದರೆ ಉತ್ತಮ ಎಂದು ಹಲವು ಮಾಜಿ ಆಟಗಾರರು ಹೇಳಿದ್ದರು. ಹೀಗಾಗಿ ರಾಹುಲ್ ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಟೀಕೆಗೆ ತಕ್ಕ ಉತ್ತರ ನೀಡಬೇಕು. ಮಂಗಳವಾರ ಪಕಟಗೊಂಡ ವಿಶ್ವಕಪ್ ತಂಡದಲ್ಲಿಯೂ ರಾಹುಲ್ ಅವರು ಮೊದಲ ಕೀಪರ್ ಆಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್,ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್.
ಪಾಕಿಸ್ತಾನ: ಫಖಾರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಂ(ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, , ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರಾವುಫ್, ಫಹೀಮ್ ಅಶ್ರಫ್.