ನ್ಯೂಯಾರ್ಕ್: ಟಿ20 ವಿಶ್ವಕಪ್ ಟೂರ್ನಿಯಲ್ಲಿ(T20 World Cup 2024) ಜೂನ್ 9ರಂದು ನಡೆಯಲಿರುವ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಪಂದ್ಯಕ್ಕೆ ಉಗ್ರರಿಂದ ದಾಳಿಯ ಬೆದರಿಕೆ ಬಂದಿರುವ ಕಾರಣ ಕ್ರೀಡಾಂಗಣದಲ್ಲಿ ಭಾರೀ ಭದ್ರತಾ ವ್ಯವಸ್ಥೆ ಕೈಗೊಳಲಾಗಿದೆ ಎಂದು ನ್ಯೂಯಾರ್ಕ್‌ನ ಗವರ್ನರ್ ಕ್ಯಾಥಿ ಹೊಚುಲ್(New York Governor Kathy Hochul) ತಿಳಿಸಿದ್ದಾರೆ.
ಐಸಿಸ್-ಕೆ ಹೆಸರಿನ ಭಯೋತ್ಪಾದಕ ಸಂಘಟನೆಯು “ಲೋನ್ ವುಲ್ಫ್” ದಾಳಿ ನಡೆಸುವುದಾಗಿ ಘೋಷಿಸಿತ್ತು. ಇತ್ತಂಡಗಳ ನಡುವೆ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ(Nassau County International Cricket Stadium)ನಲ್ಲಿ ಪಂದ್ಯ ನಡೆಯಲಿದೆ. ಇದೇ ವೇಳೆ ಡ್ರೋನ್ ದಾಳಿ ನಡೆಸುವ ಸಾಧ್ಯತೆ ಕಂಡುಬಂದಿದೆ. ಹೀಗಾಗಿ ಪಂದ್ಯ ನಡೆಯುವ ಕ್ರೀಡಾಂಗಣದ ಸುತ್ತ ‘ನೊ-ಫ್ಲೈ ಝೋನ್’ ಎಂದು ಘೋಷಿಸುವಂತೆ ನ್ಯೂಯಾರ್ಕ್ ಪೊಲೀಸ್ ಯುಎಸ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ಗೆ ವಿನಂತಿಸಿದೆ. ಈ ಮೂಲಕ ಉಗ್ರರ ದಾಳಿ ಮೇಲೆ ಕಣ್ಣಿಡಲು ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ಗೆ ಮನವಿ ಮಾಡಲಾಗಿದೆ.
“ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಾರ್ವಜನಿಕರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಪಂದ್ಯಗಳು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಾನೂನು ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ” ಎಂದು ನ್ಯೂಯಾರ್ಕ್‌ನ ಗವರ್ನರ್ ಕ್ಯಾಥಿ ಹೊಚುಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸುಧಾರಿತ ಕಣ್ಗಾವಲು ಮತ್ತು ಸಂಪೂರ್ಣ ಸ್ಕ್ರೀನಿಂಗ್ ಪ್ರಕ್ರಿಯೆಗಳು ಸೇರಿದಂತೆ ಉನ್ನತ ಭದ್ರತಾ ಕ್ರಮಗಳಲ್ಲಿ ತೊಡಗಿಸಿಕೊಳ್ಳಲು ನಾನು ನ್ಯೂಯಾರ್ಕ್ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೊಚುಲ್ ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ ಪ್ರೊ-ಇಸ್ಲಾಮಿಕ್ ಸ್ಟೇಟ್ (ಐಎಸ್)ನಿಂದ ವೆಸ್ಟ್ ಇಂಡೀಸ್ನಲ್ಲಿ ನಡೆಯುವ ಪಂದ್ಯಗಳಿಗೆ ದಾಳಿಯ ಬೆದರಿಕೆಯೊಂದು ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿತ್ತು. ಕೆನ್ಸಿಂಗ್ಟನ್ ಓವಲ್(Kensington Oval Cricket Ground) ಕ್ರಿಕೆಟ್ ಮೈದಾನ, ಬಾರ್ಬಡೋಸ್ನಲ್ಲಿ(Barbados) ಭದ್ರತಾ ಸಿಬ್ಬಂದಿಗಳು ಅಣುಕು ಪ್ರದರ್ಶನ ಮಾಡುತ್ತಿರುವ ಫೋಟೊ ಕೂಡ ವೈರಲ್ ಆಗಿತ್ತು.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ನಲ್ಲಿ ಎಷ್ಟು ಬೌಲರ್ಗಳು ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ?
ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಹೊರವಲಯದಲ್ಲಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಭಾರತ ಮತ್ತು ಪಾಕ್ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ಏರ್ಪಡಿಸಲಾಗಿದೆ ಎನ್ನಲಾಗಿದೆ.
ಟಿ20 ಮುಖಾಮುಖಿ
ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತಕ್ಕೆ ಇದರಲ್ಲೊಂದು ಸೋಲು 2021ರಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಎದುರಾಗಿತ್ತು. ಅದು ಕೂಡ 10 ವಿಕೆಟ್ ಅಂತರದ ಹೀನಾಯ ಸೋಲಾಗಿತ್ತು.