ಮುಂಬಯಿ: ಪಾಕಿಸ್ತಾನ(IND vs PAK) ವಿರುದ್ಧ ಅಕ್ಟೋಬರ್ 14ರಂದು ನಡೆಯುವ ಪಂದ್ಯಕ್ಕೆ ಟೀಮ್ ಇಂಡಿಯಾ ಆಟಗಾರರು ಕೇಸರಿ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಯನ್ನು ಬಿಸಿಸಿಐ(BCCI) ತಳ್ಳಿಹಾಕಿದೆ. ಈ ರೀತಿಯ ಯಾವುದೇ ಯೋಜನೆಯನ್ನು ನಾವು ರೂಪಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬ್ಲೂ ಜೆರ್ಸಿಯಲ್ಲೇ ಪಂದ್ಯ
“ಪಾಕಿಸ್ತಾನ ಎದುರಿನ ಪಂದ್ಯಕ್ಕೆ ಟೀಮ್ ಇಂಡಿಯಾ ಪರ್ಯಾಯ ಪಂದ್ಯದ ಕಿಟ್ ಧರಿಸಲಿದೆ ಎಂಬ ಮಾಧ್ಯಮ ವರದಿಗಳನ್ನು ನಾವು ಸ್ಪಷ್ಟವಾಗಿ ತಳ್ಳಿಹಾಕುತ್ತೇವೆ. ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಮತ್ತು ಇದೊಂದು ದಾರಿ ತಪ್ಪಿಸಲು ಕೆಲ ವ್ಯಕ್ತಿಗಳು ಮಾಡಿರುವ ಸಂಚು. 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ನಮ್ಮ ತಂಡ ಮೆನ್ ಇನ್ ಬ್ಲೂನಲ್ಲೇ ಆಟಲಿದೆ” ಎಂದು ಬಿಸಿಸಿಐನ ಗೌರವ ಖಜಾಂಚಿ ಆಶಿಶ್ ಶೆಲಾರ್ ತಿಳಿಸಿದ್ದಾರೆ.
ಸಾಮಾಜಿ ಜಾಲತಾಣ ಮತ್ತು ಕೆಲವು ಮಾಧ್ಯಮಗಳು ಪಾಕ್ ವಿರುದ್ಧ ಭಾರತ ತಂಡ ಕೇಸರಿ ಜೆರ್ಸಿಯಲ್ಲಿ ಆಡಲಿದೆ ಎಂದು ವರದಿ ಮಾಡಿತ್ತು. ಅಲ್ಲದೆ ಬಿಸಿಸಿಐ ಮೂಲಗಳು ಈ ಮಾಹಿತಿ ನೀಡಿರುವುದಾಗಿ ವರದಿಯಲ್ಲಿ ಉಲ್ಲೇಖ ಮಾಡಿತ್ತು. ಇದು ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಇದೀಗ ಬಿಸಿಸಿಐ ಸ್ಪಷ್ಟನೆ ನೀಡಿ ಇದು ಸುಳ್ಳು ಎಂದಿದೆ. ಆಸಲಿಗೆ ಐಸಿಸಿ ಪ್ರತಿ ತಂಡಕ್ಕೆ ಎರಡನೇ ಜರ್ಸಿಯನ್ನು ಆಯ್ಕೆ ಮಾಡಲು ಅವಕಾಶ ನೀಡಿದೆ. ಈಗಾಗಲೇ ಭಾರತ ತಂಡ ಪ್ರ್ಯಾಕ್ಟಿಸ್ ಮತ್ತು ಟ್ರಾವೆಲ್ ಜೆರ್ಸಿ ಕೇಸರಿ ಬಣ್ಣದಿಂದಲೇ ಕೂಡಿದೆ.
ಹಿರಿಯ ಕ್ರೀಡಾ ಪತ್ರಕರ್ತೆ ಶಾರದಾ ಅವರು “ಈ ಹೊಸ ಕೇಸರಿ ಜೆರ್ಸಿಗಳನ್ನು ಧರಿಸಿಕೊಂಡು ಆಡಿದರೆ ಪಂದ್ಯದ ಬಳಿಕ ಅವುಗಳನ್ನು ಹರಾಜು ಹಾಕಲಾಗುತ್ತದೆ ಮತ್ತು ಇದರಿಂದ ಸಿಗುವ ಹಣವನ್ನು ಯುನಿಸೆಫ್‌ಗೆ ದೇಣಿಗೆಯಾಗಿ ನೀಡಲಾಗುವುದು. ಇದೊಂದು ವ್ಯವಸ್ಥಿತ ಪ್ರಚಾರ ತಂತ್ರವಾಗಿದೆ” ಎಂದಿದ್ದರು.
ಇದನ್ನೂ ಓದಿ Ind vs Aus : ಭಾರತ ತಂಡದ ಪರ ನೂತನ ದಾಖಲೆ ಸೃಷ್ಟಿಸಿದ ಕೊಹ್ಲಿ- ರಾಹುಲ್ ಜತೆಯಾಟ
ಕಳೆದ ಬಾರಿ ಕೇಸರಿ ಜೆರ್ಸಿಯಲ್ಲಿ ಆಡಿತ್ತು ಭಾರತ…
ಲಂಡನ್ನಲ್ಲಿ ನಡೆದ 2019ರ ವಿಶ್ವಕಪ್‌ನಲ್ಲಿ ಭಾರತ ತಂಡ ಮೊದಲ ಬಾರಿಗೆ ಕೇಸರಿ ಜೆರ್ಸಿ ತೊಟ್ಟು ಆಡಿತ್ತು. ಈ ವೇಳೆಯೂ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ಟೀಮ್ ಇಂಡಿಯಾವನ್ನೂ ಕೇಸರಿಮಯ ಮಾಡುತ್ತಿದೆ ಎಂದು ಆರೋಪಿಸಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಕೇಸರಿ ಜೆರ್ಸಿ ಹಾಕಿ ಪಂದ್ಯ ಆಡಿತ್ತು.
ಕೇಸರಿ ಶಾಲು ಹಾಕಿ ಸ್ವಾಗತ
ಪಾಕಿಸ್ತಾನ ತಂಡ ಭಾರತಕ್ಕೆ ಬಂದಾಗ ಹೈದಾರಾಬಾದ್ನಲ್ಲಿ ಪಾಕ್ ಆಟಗಾರರಿಗೆ ಕೇಸರಿ ಶಾಲು ಹಾಕಿ ಸ್ವಾಗತ ಕೋರಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದು ಮಾಡಿತ್ತು. ಕೆಲವರು ಇದು ಅಮಿತ್ ಶಾ ಅವರ ಮಗ ಜಯ್ ಶಾ ಅವರು ಉದ್ದೇಶ ಪೂರ್ವಕವಾಗಿ ಮಾಡಿದ ಕೃತ್ಯ ಎಂದು ಕೆಲ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.