ಕೊಲಂಬೋ: ಸಂಪೂರ್ಣ ಫಿಟ್ ಆಗದ ಕಾರಣ ಏಷ್ಯಾಕಪ್ನ(Asia Cup 2023) ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಕನ್ನಡಿಗ ಕೆ.ಎಲ್. ರಾಹುಲ್(KL Rahul) ಅವರು ಈಗ ಫುಲ್ ಫಿಟ್ ಆಗಿದ್ದು ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಸೆಪ್ಟೆಂಬರ್ 10 ರಂದು ನಡೆಯುವ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ(INDvsPAK) ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಪಂದ್ಯಕ್ಕಾಗಿ ರಾಹುಲ್ ಕೋಚ್ ದ್ರಾವಿಡ್(Rahul Dravid) ಮಾರ್ಗದರ್ಶನದಲ್ಲಿ ವಿಶೇಷ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಆದರೆ ಕೆಲ ಮಾಜಿ ಆಟಗಾರರು ರಾಹುಲ್ ಅವರನ್ನು ಪಾಕ್ ವಿರುದ್ಧದ ಪಂದ್ಯದಲ್ಲಿ ಆಡಿಸಬಾರದು ಎಂದು ಒತ್ತಾಯಿಸಿದ್ದಾರೆ.
ಐಪಿಎಲ್ ಸಂದರ್ಭದಲ್ಲಿ ತೊಡೆಯ ಗಾಯದಿಂದ ಬಳಲಿದ್ದ ರಾಹುಲ್ ಶಸ್ತ್ರಚಿಕಿತ್ಸೆ ಪಡೆದಿದ್ದರು. ನಂತರ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದರು. ಸೋಮವಾರ ಅವರು ಫಿಟ್ನೆಸ್ ಪಾಸ್ ಆಗಿ ಶ್ರೀಲಂಕಾಕ್ಕೆ ತೆರಳಿದ್ದರು. ಗುರುವಾರ ಪ್ರೇಮದಾಸ ಕ್ರಿಕೆಟ್ ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ರಾಹುಲ್ ಅಲಭ್ಯತೆಯಲ್ಲಿ ಪಾಕ್ ಮತ್ತು ನೇಪಾಳ ವಿರುದ್ಧ ಕೀಪಿಂಗ್ ನಡೆಸಿದ್ದ ಇಶಾನ್ ಅವರನ್ನು ಸೂಪರ್-4 ಪಂದ್ಯದಿಂದ ಕೈಬಿಡುವುದು ಪಕ್ಕಾ ಆಗಿದೆ.
ವಿಶ್ವಕಪ್ನಲ್ಲಿಯೂ ಸ್ಥಾನ
ಮಂಗಳವಾರ ಪಕಟಗೊಂಡ ವಿಶ್ವಕಪ್ ತಂಡದಲ್ಲಿಯೂ ರಾಹುಲ್ ಅವರು ಮೊದಲ ಕೀಪರ್ ಆಗಿ ತಂಡಕ್ಕೆ ಆಯ್ಕೆಯಾಗಿದ್ದರು. ಇದೇ ವೇಳೆ ಮಾತನಾಡಿದ್ದ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್, ಕೆ.ಎಲದದ ರಾಹುಲ್ ಉಪಸ್ಥಿತಿ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಅತ್ಯುತ್ತಮ ಸಮತೋಲನ ಒದಗಿಸಲಿದೆ. ಅವರು ಈಗ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಹೇಳಿದ್ದರು.
ಐಪಿಎಲ್ ವೇಳೆ ಗಾಯಗೊಂಡಿದ್ದ ರಾಹುಲ್
31 ವರ್ಷದ ರಾಹುಲ್ ಮೇ 1ರಂದು ನಡೆದ ಆರ್ಸಿಬಿ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ರಾಹುಲ್ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಟಗಾರರ ಸಹಾಯದಿಂದ ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಗಿತ್ತು. ಗಾಯದ ಪ್ರಮಾಣ ಗಂಭಿರವಾದ ಪರಿಣಾಮ ಅವರಿಗೆ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹೀಗಾಗಿ ಅವರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು.
ಇದನ್ನೂ ಓದಿ Asia Cup 2023 : ನಮಗೆ ಲಾಸ್ ಆಗಿದೆ; ದುಡ್ಡು ಕೊಡಿ ಎಂದು ಜಯ್ ಶಾಗೆ ದುಂಬಾಲು ಬಿದ್ದಿದೆ ಪಾಕಿಸ್ತಾನ!
ಶೇ.77ರಷ್ಟು ಮಳೆ ಸಾಧ್ಯತೆ
ಪಲ್ಲೆಕೆಯಲ್ಲಿ ಮಳೆಯಿಂದ ಪಂದ್ಯಗಳಿಗೆ ಸಮಸ್ಯೆಯಾದ ಕಾರಣ ಕೊಲಂಬೊದ ಆರ್. ಪ್ರೇಮದಾಸ(R.Premadasa Stadium, Colombo) ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಸೂಪರ್-4 ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ಗೆ ಒತ್ತಾಯಿಸಿತ್ತು. ಆದರೆ ಪಾಕ್ನ ಈ ಮನವಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತಿರಸ್ಕರಿಸಿತ್ತು. ಇದೀಗ ಕೊಲಂಬೊದಲ್ಲಿ ನಡೆಯುವ ಪಂದ್ಯಗಳಿಗೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಭಾರತ ಮತ್ತು ಪಾಕ್ ಪಂದ್ಯ ನಡೆಯುವ ಸೆಪ್ಟೆಂಬರ್ 10ರಂದು ಬೆಳಗ್ಗಿನಿಂದಲೇ ಇಲ್ಲಿ ಶೇ.77ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.