ಮೆಲ್ಬೋರ್ನ್: ಟಿ೨೦ ವಿಶ್ವ ಕಪ್‌ನ ಸೂಪರ್ 12 ಹಂತದ ಪಾಕಿಸ್ತಾನ ಮತ್ತು ಭಾರತ (IND VS PAK) ವಿರುದ್ಧದ ಭಾನುವಾರದ ಸೂಪರ್ ಥ್ರಿಲ್ಲಿಂಗ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕೊನೆಗೂ ಗೆದ್ದು ಟಿ20 ವಿಶ್ವ ಕಪ್‌ನಲ್ಲಿ (T20 World Cup 2022) ತನ್ನ ಅಭಿಯಾನವನ್ನು ಶುಭಾರಂಭ ಮಾಡಿದೆ. ಮೆಲ್ಬೋರ್ನ್ ಮೈದಾನದಲ್ಲಿ ರನ್ ಮಳೆ ಹರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ವಿರಾಟ್ ಕೊಹ್ಲಿಯನ್ನು ನಾಯಕ ರೋಹಿತ್ ಶರ್ಮಾ ತನ್ನ ಹೆಗಲ ಮೇಲೆ ಹೊತ್ತು ಮೈದಾನದಲ್ಲಿ ಕುಣಿದಾಡಿದರು. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆರಂಭಿಕ ಆಘಾತ ಅನುಭವಿಸಿದ ಭಾರತಕ್ಕೆ ಆಸರೆಯಾದದ್ದು ವಿರಾಟ್ ಕೊಹ್ಲಿ. 53 ಎಸೆತದಲ್ಲಿ ಅಜೇಯ ೮೨ ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಕೊಹ್ಲಿಯ ಈ ಇನ್ನಿಂಗ್ಸ್ ಕಂಡ ನಾಯಕ ರೋಹಿತ್ ಶರ್ಮಾ ಕೂಡ ಸಂತಸದ ಅಲೆಯಲ್ಲಿ ತೇಲಿದರು. ಅಶ್ವಿನ್ ಗೆಲುವಿನ ರನ್ ಬಾರಿಸಿದ ಬಳಿಕ ಮೈದಾನಕ್ಕೆ ಓಡಿ ಬಂದ ರೋಹಿತ್, ಕಿಂಗ್ ಕೊಹ್ಲಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಾಚರಣೆ ಮಾಡಿದರು.
ವಿರಾಟ್-ರೋಹಿತ್ ಮಧ್ಯೆ ಎಲ್ಲವೂ ಸರಿಯಿದೆ
ಟಿ20 ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಿದ ಬಳಿಕ ಕೊಹ್ಲಿ ಮತ್ತು ರೋಹಿತ್ ನಡುವೆ ಏನೂ ಸರಿ ಇಲ್ಲ ಎಂಬ ಟಾಕ್ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿತ್ತು. ಆದರೆ ಇಂದು ಮೆಲ್ಬೋರ್ನ್ನಲ್ಲಿ ನಡೆದ ಅದೊಂದು ಘಟನೆಯಿಂದ ಎಲ್ಲ ಊಹಾಪೋಹಗಳಿಗೂ ತೆರೆ ಬಿದ್ದಂತಾಗಿದೆ. ಮೊಹಮ್ಮದ್ ನವಾಜ್ ಅವರ ಕೊನೆಯ ಎಸೆತದಲ್ಲಿ ಅಶ್ವಿನ್ ಸಿಂಗಲ್ ರನ್ ಗಳಿಸಿದಾಗ ಟೀಮ್ ಇಂಡಿಯಾ ಗೆಲುವು ಸಾಧಿಸಿತು.
ಈ ವೇಳೆ ಅಕ್ಷರಶಃ ಗದ್ಗದಿತರಾದ ಕೊಹ್ಲಿ, ತನ್ನ ಕಣ್ಣಾಲಿಗಳಲ್ಲಿ ಆನಂದಬಾಷ್ಪ ತುಂಬಿಕೊಂಡು ಆಕಾಶದತ್ತ ಮುಖಮಾಡಿ ತಮ್ಮದೇ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದರು. ಅದೇ ಸಮಯಕ್ಕೆ ಮೈದಾನಕ್ಕೆ ಬಂದ ರೋಹಿತ್ ಮಗುವಿನಂತೆ ಕೊಹ್ಲಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಮೈದಾನದಲ್ಲೇ ಕುಣಿಯಲಾರಂಭಿಸಿದರು. ಜತೆಗೆ ಕೊಹ್ಲಿಯನ್ನು ತಬ್ಬಿಕೊಂಡು ಪಂದ್ಯ ಗೆಲ್ಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಈ ದೃಶ್ಯ ಇದೀಗ ಎಲ್ಲಡೆ ಮೆಚ್ಚುಗೆಗೆ ಪಾತ್ರವಾಗಿದೆ. ಜತೆಗೆ ವಿರಾಟ್ ಮತ್ತು ರೋಹಿತ್ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎನ್ನುವ ಸಂದೇಶವು ಈ ಘಟನೆ ಮೂಲಕ ರವಾನೆಯಾಗಿದೆ.
ಇದನ್ನೂ ಓದಿ | IND vs PAK | ಪಾಕ್ ವಿರುದ್ಧದ ಗೆಲುವಿನ ಕೊನೇ ಓವರ್ ಥ್ರಿಲ್ ಹೀಗಿತ್ತು, ಇದೊಂದು ಸ್ಮರಣೀಯ ಇನಿಂಗ್ಸ್