Site icon Vistara News

IND vs PAK: ಪಾಕ್​ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಲು ಕೊಹ್ಲಿ ಸಜ್ಜು; ಯಾವುದು ಈ ದಾಖಲೆ?

IND vs PAK

IND vs PAK: Virat Kohli's T20 World Cup Records and Stats against Pakistan

ನ್ಯೂಯಾರ್ಕ್​: ಪಾಕಿಸ್ತಾನ(IND vs PAK) ವಿರುದ್ಧ ನಾಳೆ(ಭಾನುವಾರ, ಜೂ.9) ನಡೆಯುವ ಟಿ20 ವಿಶ್ವಕಪ್(T20 World Cup) ಪಂದ್ಯದಲ್ಲಿ​ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ(Virat Kohli) ವಿಶ್ವ ದಾಖಲೆಯೊಂದನ್ನು ಬರೆಯುವ ನಿರೀಕ್ಷೆಯಲ್ಲಿದ್ದಾರೆ.

ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ 9 ಬೌಂಡರಿ ಬಾರಿಸಿದರೆ, ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಮೊದಲ ಆಟಗಾರ ಎನ್ನುವ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ. ಸದ್ಯ ಈ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ(Mahela Jayawardene) ಹೆಸರಿನಲ್ಲಿದೆ. ಜಯವರ್ಧನೆ 111 ಬೌಂಡರಿ ಬಾರಿಸಿದ್ದರೆ, ಕೊಹ್ಲಿ ಸದ್ಯ 103* ಬೌಂಡರಿ ಬಾರಿಸಿದ್ದಾರೆ. ಕಳೆದ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲೇ ಕೊಹ್ಲಿಗೆ ಈ ದಾಖಲೆ ನಿರ್ಮಿಸುವ ಅವಕಾಶವಿತ್ತು. ಆದರೆ ಕೊಹ್ಲಿ ಕೇವಲ 1 ರನ್​ಗೆ ವಿಕೆಟ್​ ಒಪ್ಪಿಸಿದ್ದರು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸದಾ ಉತ್ತಮ ಬ್ಯಾಟಿಂಗ್​ ನಡೆಸುವ ಕೊಹ್ಲಿ ಈ ಮೈಲುಗಲ್ಲನ್ನು ಪಾಕ್​ ವಿರುದ್ಧವೇ ಮಾಡಲಿದ್ದಾರೆ ಎನ್ನುವುದು ಅವರ ಅಭಿಮಾನಿಗಳ ನಂಬಿಕೆ. 2022ರಲ್ಲಿ ಮೆಲ್ಬೋರ್ನ್​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಆರಂಭಿಕ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಕೊಹ್ಲಿ ಅಸಾಮಾನ್ಯ ಬ್ಯಾಟಿಂಗ್​ ನಡೆಸಿ ಅಜೇಯ 82 ರನ್​ ಬಾರಿಸಿ ಪಾಕ್​ಗೆ ಸೋಲಿನ ರುಚಿ ತೋರಿಸಿದ್ದರು. ಅವರ ಅಂದಿನ ಬ್ಯಾಟಿಂಗ್​ ಗತವೈಭವ ಮತ್ತೆ ಮರುಕಳಿಸಲಿ ಎನ್ನುವುದು ಅಭಿಮಾನಿಗಳ ಆಶಯ.

ಇದನ್ನೂ ಓದಿ IND vs PAK: ಭಾರತ-ಪಾಕ್​ ಪಂದ್ಯಕ್ಕೆ 4 ಹಂತದ ಭದ್ರತಾ ವ್ಯವಸ್ಥೆ; ಮೈದಾನಕ್ಕೆ ನುಗ್ಗಿದರೆ ಜೈಲೂಟ ಖಚಿತ!

ಟ20 ವಿಶ್ವಕಪ್​ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಬ್ಯಾಟರ್​ಗಳು

ಆಟಗಾರದೇಶಇನಿಂಗ್ಸ್​ಬೌಂಡರಿ
ಮಹೇಲಾ ಜಯವರ್ಧನೆಶ್ರೀಲಂಕಾ31111
ವಿರಾಟ್ ಕೊಹ್ಲಿಭಾರತ27103*
ತಿಲಕರತ್ನೆ ದಿಲ್ಶನ್ಶ್ರೀಲಂಕಾ35101
ರೋಹಿತ್​ ಶರ್ಮಭಾರತ3695*
ಡೇವಿಡ್​ ವಾರ್ನರ್​ಆಸ್ಟ್ರೇಲಿಯಾ3492
ಕ್ರಿಸ್​ ಗೇಲ್​ವೆಸ್ಟ್​ ಇಂಡೀಸ್​3178
ಜಾಸ್​ ಬಟ್ಲರ್​ಇಂಗ್ಲೆಂಡ್​2769*
ಕೇನ್​ ವಿಲಿಯಮ್ಸನ್​ನ್ಯೂಜಿಲ್ಯಾಂಡ್​2569*
ಬ್ರೆಂಡನ್ ಮೆಕಲಮ್ನ್ಯೂಜಿಲ್ಯಾಂಡ್2567
ಕುಮಾರ್ ಸಂಗಕ್ಕಾರಶ್ರೀಲಂಕಾ3163

ಪಂದ್ಯಕ್ಕೆ 4 ಹಂತದ ಭದ್ರತೆ


ಈ ಪಂದ್ಯಕ್ಕೆ ಉಗ್ರರ ದಾಳಿಯ ಭೀತಿ(india vs pak terror threat) ಇರುವ ಕಾರಣದಿಂದ ಸ್ಟೇಡಿಯಂಗೆ 4 ಹಂತದ ಭಾರೀ ಭದ್ರತೆ ಏರ್ಪಡಿಸಲಾಗಿದೆ. ಕಳೆದ ವಾರ ಐಸಿಸ್-ಕೆ ಹೆಸರಿನ ಭಯೋತ್ಪಾದಕ ಸಂಘಟನೆಯು “ಲೋನ್ ವುಲ್ಫ್” ದಾಳಿ ನಡೆಸುವುದಾಗಿ ಘೋಷಿಸಿತ್ತು. ಹೀಗಾಗಿ ಪಂದ್ಯ ನಡೆಯುವ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ(Nassau County International Cricket Stadium)ಗೆ ನ್ಯೂಯಾರ್ಕ್​ ಪೊಲೀಸರಿಂದ ಮತ್ತು ಮಿಲಿಟರಿ ಪಡೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.

Exit mobile version