ನ್ಯೂಯಾರ್ಕ್: ಎರಡೂ ದೇಶಗಳ ಅಭಿಮಾನಿಗಳು ರೋಚಕ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಟಿ20 ಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭ್ಯಾಸದ ವೇಳೆ ಬೆರಳಿನ ಗಾಯಕ್ಕೆ ತುತ್ತಾಗಿದ್ದ ಟೀಮ್ ಇಂಡಿಯಾ(Team India) ನಾಯಕ ರೋಹಿತ್ ಶರ್ಮಾ(Rohit Sharma) ಅವರು ಇಂದಿನ ಪಂದ್ಯದಲ್ಲಿ ಆಡಲಿದ್ದಾರಾ ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭುಜಕ್ಕೆ ಚೆಂಡಯ ತಗುಲಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್ ಮೊಟಕುಗೊಳಿಸಿದ್ದ ರೋಹಿತ್, ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಶನಿವಾರ ಅಭ್ಯಾಸ ನಡೆಸುವ ವೇಳೆ ಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಈ ವೇಳೆ ರೋಹಿತ್ ಅವರು ಪಾಕ್ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಚಿಂತಿಸುವ ಅಗತ್ಯವಿಲ್ಲ. ರೋಹಿತ್ ಫಿಟ್ ಆಗಿದ್ದು ಇಂದಿನ ಪಂದ್ಯದಲ್ಲಿ ಆಡಲಿದ್ದಾರೆ. ಈ ವಿಚಾರವನ್ನು ರೋಹಿತ್ ಶನಿವಾರ ರಾತ್ರಿ ನಡೆದ ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದರು.
ಪಾಕ್ಗೆ ಮಾಡು ಇಲ್ಲವೇ ಮಡಿ ಪಂದ್ಯ
ಆತಿಥೇಯ ಅಮೆರಿಕ ವಿರುದ್ಧ ಸೂಪರ್ ಓವರ್‌ನಲ್ಲಿ ಮುಗ್ಗರಿಸಿದ ಪಾಕಿಸ್ತಾನ ಮುಂದಿನ ಹಂತಕ್ಕೇರಬೇಕಾದರೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಸೋತರೆ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ. ಹೀಗಾಗಿ ಇಂದಿನ ಪಂದ್ಯ ರೋಚಕವಾಗಿ ಸಾಗುವ ನಿರೀಕ್ಷೆ ಮಾಡಬಹುದು. ನಿರೀಕ್ಷಿತ ಬೌನ್ಸರ್ ಪುಡಿದೇಳುವ ನಾಸ್ಸೌ ಪಿಚ್ನಲ್ಲಿ ಆಡುವುದು ಕೂಡ ಉಭಯ ತಂಡಗಳಿಗೆ ಸವಾಲಿನಿಂದ ಕೂಡಿರಲಿದೆ. ಬ್ಯಾಟರ್ಗಳು ಗಾಯಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಹೀಗಾಗಿ ಎಚ್ಚರಿಕೆಯಿಂದ ಆಡಬೇಕಿದೆ.
ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ
ಭಾರತ ಈ ಪಂದ್ಯಕ್ಕಾಗಿ ಒಂದು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳುವ ಯೋಜನೆಯಲ್ಲಿದೆ. ಅಕ್ಷರ್ ಪಟೇಲ್ ಅವರನ್ನು ಈ ಪಂದ್ಯದಿಂದ ಕೈಬಿಡುವ ಸಾಧ್ಯತೆ ಅಧಿಕವಾಗಿದೆ. ಉಳಿದಂತೆ ಯಾವುದೇ ಬದಲಾವಣೆ ಕಂಡು ಬಾರದು. ಕೊಹ್ಲಿ ಮತ್ತು ರೋಹಿತ್ ಅವರೇ ಭಾರತದ ಇನಿಂಗ್ಸ್ ಆರಂಭಿಸಲಿದ್ದಾರೆ.
ಇದನ್ನೂ ಓದಿ IND vs PAK: ಭಾರತ-ಪಾಕ್ ಪಂದ್ಯಕ್ಕೆ ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಏನು?
ಸಂಭ್ಯಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್/ ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.
ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಉಸ್ಮಾನ್ ಖಾನ್, ಫಖರ್ ಜಮಾನ್, ಅಜಮ್ ಖಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಮೊಹಮ್ಮದ್ ಅಮೀರ್, ಹಾರಿಸ್ ರೌಫ್.