Site icon Vistara News

IND VS BAN | 12 ವರ್ಷಗಳ ಬಳಿಕ ಟೀಮ್​ ಇಂಡಿಯಾ ಪರ ಅವಕಾಶ ಪಡೆದ ಉನಾದ್ಕತ್​; ಪತ್ನಿಯಿಂದ ಭಾವನಾತ್ಮಕ ಪೋಸ್ಟ್​

ನವದೆಹಲಿ: ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಗೆ ಗಾಯಾಳು ಮೊಹಮ್ಮದ್​ ಶಮಿ ಬದಲಿಗೆ ಎಡಗೈ ವೇಗಿ ಜಯದೇವ್‌ ಉನಾದ್ಕತ್‌ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಬರೊಬ್ಬರಿ 12 ವರ್ಷಗಳ ಬಳಿಕ ಉನಾದ್ಕತ್ ಮತ್ತೆ ಟೀಮ್​ ಇಂಡಿಯಾ ಪರ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜಯದೇವ್‌ ಉನಾದ್ಕತ್​ಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕ ಖಷಿಯಲ್ಲಿ ಅವರ ಪತ್ನಿ ರಿನ್ನಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಟೀಮ್​ ಇಂಡಿಯಾ ಜೆರ್ಸಿಯೊಂದಿಗಿನ ಉನಾದ್ಕತ್ ಅವರ ಫೋಟೊವನ್ನು ಹಂಚಿಕೊಳ್ಳುವ ಮೂಲಕ ” ನಿಮ್ಮ ಹೆಂಡತಿಯಾಗಿ ನಾನು ಇಂದು ಬಹಳ ಹೆಮ್ಮೆ ಪಡುವ ದಿನ” ಎಂದು ಭಾವನಾತ್ಮಕವಾಗಿ ಪೋಸ್ಟ್​​ ಮಾಡಿದ್ದಾರೆ.

12 ವರ್ಷದ ಬಳಿಕ ಅವಕಾಶ
ಬಾಂಗ್ಲಾದೇಶ ಸರಣಿ ಮೂಲಕ ಬರೊಬ್ಬರಿ 12 ವರ್ಷಗಳ ಬಳಿಕ ಉನಾದ್ಕತ್ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡುತ್ತಿದ್ದು, ಉನಾದ್ಕತ್ ತಮ್ಮ ಏಕೈಕ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು 2010ರಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಂಚೂರಿಯನ್‌ನಲ್ಲಿ ಆಡಿದ್ದರು. ಅದಾದ ಬಳಿಕ 7 ಅಂತಾರಾಷ್ಟ್ರೀಯ ಏಕ ದಿನ ಪಂದ್ಯಗಳಲ್ಲಿ ಅವಕಾಶ ಪಡೆದುಕೊಂಡ ಇವರು 10 ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿದ್ದರು. ಆದರೆ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಭದ್ರಪಡಿಸಲು ಸಾಧ್ಯವಾಗಿರಲಿಲ್ಲ.

ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದರೂ ಅವಕಾಶ ಸಿಗದ ಕಾರಣ ಈ ಹಿಂದೆ ಟೀಮ್​ ಇಂಡಿಯಾ ಮ್ಯಾನೆಜ್​ಮೆಂಟ್​ ಮತ್ತು ಬಿಸಿಸಿಐ ವಿರುದ್ಧ ಹಲವು ಬಾರಿ ಉನಾದ್ಕತ್​ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅಂತಿಮವಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ತಂಡದಲ್ಲಿ ಏಕೈಕ ಎಡಗೈ ವೇಗಿಯಾದ ಕಾರಣ ಬಾಂಗ್ಲಾ ವಿರುದ್ಧ ಆಡುವ ಬಳಗದಲ್ಲಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಕಳೆದ ವರ್ಷ ರಣಜಿ ಟ್ರೋಫಿಯ ಗರಿಷ್ಠ ವಿಕೆಟ್‌ ಸರದಾರ ಎನಿಸಿದ್ದ ಉನಾದ್ಕತ್‌, ಇತ್ತೀಚೆಗೆ ಮುಕ್ತಾಯಗೊಂಡ ವಿಜಯ್‌ ಹಜಾರೆ ಟೂರ್ನಿಯಲ್ಲೂ ಅತಿಹೆಚ್ಚು ವಿಕೆಟ್‌ ಪಡೆದಿದ್ದರು.

ಇದನ್ನೂ ಓದಿ | IND VS SL | ವರ್ಷಾರಂಭದ ಭಾರತ ಮತ್ತು ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದ ಟಿಕೆಟ್ ದರ ಏರಿಕೆ?

Exit mobile version