Site icon Vistara News

IND vs SA 3rd T20: ನಾಳೆ ನಡೆಯುವ ಅಂತಿಮ ಟಿ20 ಪಂದ್ಯದ ಹವಾಮಾನ ವರದಿ ಹೇಗಿದೆ?

wanderers stadium

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರ ನಡೆದಿದ್ದ ದ್ವಿತೀಯ ಟಿ20 ಪಂದ್ಯದಲ್ಲಿ ಸೋಲು ಕಂಡ ಭಾರತ ಸರಣಿಯ ಮೂರನೇ ಹಾಗೂ ಅಂತಿಮ(IND vs SA 3rd T20) ಪಂದ್ಯವನ್ನಾಡಲು ಸಿದ್ಧವಾಗಿದೆ. ಈ ಪಂದ್ಯ ಗುರುವಾರ ಜೊಹಾನ್ಸ್‌ಬರ್ಗ್​ನಲ್ಲಿ ನಡೆಯಲಿದೆ. ಈ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡ ಮತ್ತು ಹವಾಮಾನ ವರದಿಯ ಮಾಹಿತಿ ಇಂತಿದೆ.

ಹವಾಮಾನ ವರದಿ

ವೆದರ್‌ಕಾಮ್ ನೀಡಿದ ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯ ನಡೆಯುವ ಜೋಹಾನ್ಸ್‌ಬರ್ಗ್‌ನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಇರಲಿದೆ ಎನ್ನಲಾಗಿದೆ. ಮಳೆ ಸಾಧ್ಯತೆ ಶೇ.5ರಷ್ಟು ಇರಲಿದೆ ಎಂದಿದೆ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ದ್ವಿತೀಯ ಪಂದ್ಯವೂ ಮಳೆಯಿಂದ ಅಡಚಣೆಯಾಗಿ 15 ಓವರ್​ಗಳ ಪಂದ್ಯ ನಡೆದಿತ್ತು. ಆದರೆ ಅಂತಿಮ ಪಂದ್ಯಕ್ಕೆ ಮಳೆ ಕಾಟ ಇಲ್ಲದಿರುವುದು ಅಭಿಮಾನಿಗಳಿಗೆ ಸಂತಸ ನೀಡಿದೆ.

ಪಿಚ್​ ರಿಪೋರ್ಟ್​

ಹೇಳಿ ಕೇಳಿ ಜೊಹಾನ್ಸ್‌ಬರ್ಗ್‌ನ ವಾಂಡರರ್ ಸ್ಟೇಡಿಯಂ(Wanderers Stadium) ಭಾರತದ ನೆಚ್ಚಿನ ತಾಣ. ಇಲ್ಲಿ ಆಡಿದ ಏಕದಿನ, ಟಿ20 ಮತ್ತು ಟೆಸ್ಟ್​ ಪಂದ್ಯದಲ್ಲಿ ಭಾರತ ಉತ್ತಮ ದಾಖಲೆ ಹೊಂದಿದೆ. ಒಂದು ಪಂದ್ಯ ಸೋತಿರುವ ಭಾರತ ಇದೀಗ ತಮ್ಮ ನೆಚ್ಚಿನ ತಾಣದಲ್ಲಿ ನಡೆಯುವ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲ ಮಾಡುವ ಹಂಬಲದಲ್ಲಿದೆ. ಇಲ್ಲಿನ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ.

ಶ್ರೀಲಂಕಾ ತಂಡ 2007ರಲ್ಲಿ ಕೀನ್ಯಾ ವಿರುದ್ಧ ಇದೇ ಮೈದಾನದಲ್ಲಿ 6 ವಿಕೆಟ್​ಗೆ 260 ಗಳಿಸಿದ್ದು ಇದುವರೆಗಿನ ಅತ್ಯಧಿಕ ಮೊತ್ತವಾಗಿದೆ. ಈ ಪಂದ್ಯದಲ್ಲಿ ಸನತ್ ಜಯಸೂರ್ಯ ಅವರು ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಕೇವಲ 44 ಎಸೆತಗಳಲ್ಲಿ 88 ರನ್ ಬಾರಿಸಿದ್ದರು. ಮಹೇಲ ಜಯವರ್ಧನ 27 ಎಸೆತಗಳಲ್ಲಿ 65 ರನ್ ಗಳಿಸಿ ಚಚ್ಚಿದ್ದರು. ಈ ಮೈದಾನದ ಕಡಿಮೆ ಮೊತ್ತ 83 ರನ್‌. ಇದು ಕೂಡ 2007ರಲ್ಲಿ ನಡೆದ ಪಂದ್ಯವಾಗಿತ್ತು. ಶ್ರೀಲಂಕಾ ತಂಡ ಬಾಂಗ್ಲಾದೇಶವನ್ನು ಈ ಮೊತ್ತಕ್ಕೆ ಆಲ್​ಔಟ್​ ಮಾಡಿತ್ತು.

ಇದನ್ನೂ ಓದಿ IND vs SA: ಮಳೆ ಪಂದ್ಯದಲ್ಲಿ ಭಾರತಕ್ಕೆ 5 ವಿಕೆಟ್​ ಸೋಲು

ಸಂಭಾವ್ಯ ತಂಡ

ಭಾರತ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್(ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ(ವಿಕೆಟ್​ ಕೀಪರ್​), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಶದೀಪ್​ ಸಿಂಗ್, ಮುಖೇಶ್ ಕುಮಾರ್

ದಕ್ಷಿಣ ಆಫ್ರಿಕಾ: ಮ್ಯಾಥ್ಯೂ ಬ್ರೀಟ್ಜ್ಕೆ, ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್​ ಕೀಪರ್​), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಆಂಡಿಲ್ ಫೆಹ್ಲುಕ್ವಾಯೊ, ಜೆರಾಲ್ಡ್ ಕೊಯೆಟ್ಜಿ, ಲಿಜಾಡ್ ವಿಲಿಯಮ್ಸ್, ತಬ್ರೈಜ್ ಶಮ್ಸಿ.

Exit mobile version