ಜೊಹಾನ್ಸ್ಬರ್ಗ್: ವಿಶ್ವಕಪ್ ಫೈನಲ್ ಸೋಲಿನ ಬಳಿಕ ಭಾರತ ತಂಡ ಮೊದಲ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಾಳೆ(ಡಿ.17) ನಡೆಯುವ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ ವಿಶ್ವಕಪ್ ಆಡಿದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಸೇರಿ ಕೆಲ ಸ್ಟಾರ್ ಆಟಗಾರರು ಈ ಸರಣಿಯಲ್ಲಿ ಕಾಣಿಸಿಕೊಂಡಿಲ್ಲ.
ಯುವ ಪಡೆಗೆ ಸವಾಲು
ಹಿರಿಯ ಮತ್ತು ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಗೆ ಈ ಸರಣಿ ಸವಾಲಿನಿಂದ ಕೂಡಿದೆ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಭವಿಷ್ಯದ ಆಟಗಾರರಾಗಿ ತಂಡದಲ್ಲಿ ಮುಂದುವರಿಯಬಹುದು. ಏಕೆಂದರೆ ರೋಹಿತ್,ಕೊಹ್ಲಿ, ಜಡೇಜಾ ಇವರೆಲ್ಲ 35 ಪ್ಲಸ್ ವಯಸ್ಸು ದಾಟಿದ್ದಾರೆ. ಹೀಗಾಗಿ ಇವರೆಲ್ಲ ನಾಲ್ಕು ವರ್ಷಗಳ ಬಳಿಕ ಅಂದರೆ, 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ನಲ್ಲಿ ಆಡುವುದು ಅನುಮಾನ. ಹೀಗಾಗಿ ಬಿಸಿಸಿಐ ಈಗಿಂದಲೇ ತಂಡವನ್ನು ಕಟ್ಟುವ ಕಾರ್ಯ ಆರಂಭಿಸಿದೆ. ಇದರ ಭಾಗವಾಗಿಯೇ ಈ ಸರಣಿಯಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಿದೆ. ಯುವ ಪಡ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ ಅಷ್ಟೆ.
Our ODI group has arrived in Johannesburg! 🙌🏽
— BCCI (@BCCI) December 15, 2023
Preparations have begun. 1st one-day on Sunday.#TeamIndia #SAvIND pic.twitter.com/82ho3o8qQK
ಸಂಜು ಸ್ಯಾಮ್ಸನ್ ಮತ್ತು ಋತುರಾಜ್ ಗಾಯಕ್ವಾಡ್ ಭಾರತ ಇನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಮಾತುಗಳು ಕಳಿ ಬಂದಿದೆ. ಆರಂಭಿ ಆಟಗಾರನಾದರೂ ವಿಶ್ವಕಪ್ನಲ್ಲಿ 5ನೇ ಕ್ರಮಾಂಕದಲ್ಲಿ ಆಡಿದ್ದ ರಾಹುಲ್ ಅವರು ಇದೇ ಕ್ರಮಾಂಕದಲ್ಲಿ ತಮ್ಮ ಆಟ ಮುಂದುವರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸಂಜು ಇದ್ದರೂ ಕೀಪಿಂಗ್ ರಾಹುಲ್ ಅವರೇ ಮಾಡಲಿದ್ದಾರೆ.
ಪಂದ್ಯ ಆರಂಭಕೆ ಒಂದು ದಿನ ಮುಂಚಿತವಾಗಿ ಸರಣಿಯಿಂದ ಹಿಂದೆ ಸರಿದ ದೀಪಕ್ ಚಹರ್ ಸ್ಥಾನಕ್ಕೆ ಆಯ್ಕೆಯಾದ ಯುವ ಬೌಲರ್ ಆಕಾಶ್ದೀಪ್ಗೆ ಈ ಪಂದ್ಯದಲ್ಲಿ ಅವಕಾಶ ಸಿಗುವುದು ಅನುಮಾನ. ಸದ್ಯಕ್ಕೆ ಅನುಭವಿಯಾಗಿ ತಂಡದಲ್ಲಿರುವ ಅರ್ಶದೀಪ್ ಸಿಂಗ್ ಅವರು ಬೌಲಿಂಗ್ ಪಡೆಯನ್ನು ಮುನ್ನಡೆಸಬೇಕಿದೆ. ಅವೇಶ್ ಖಾನ್ ತಮ್ಮ ಎಸೆತಕ್ಕೆ ಸಾಣೆ ಹಿಡಿದರೆ ಉತ್ತಮ. ಹಿರಿಯ ಸ್ಪಿನ್ನರ್ ಯಜುವೇಂದ್ರ ಚಹಲ್ಗೂ ಅವಕಾಶ ಕಷ್ಟ.
ಐಡೆನ್ ಮಾರ್ಕ್ರಮ್ ಪಡೆಯೂ ಕೂಡ ಭಾರತ ತಂಡದಂತೆ ಯುವ ಪಡೆಯನ್ನ ನೆಚ್ಚಿಕೊಂಡಿದೆ. ಅನುಭವಿ ಬೌಲರ್ಗಳಾದ ಲುಂಗಿ ಎನ್ಗಿಡಿ, ಕಗಿಸೊ ರಬಾಡ ತಂಡದಲ್ಲಿಲ್ಲ. ನಾಯಕ ಟೆಂಬ ಬವುಮಾ ಕೂಡ ಇಲ್ಲ. ಆದರೂ ಕೂಡ ಹರಿಣ ಪಡೆ ಎಲ್ಲ ವಿಭಾಗದಲ್ಲಿಯೂ ವೈವಿದ್ಯಮಯವಾಗಿದೆ.
ಇದನ್ನೂ ಓದಿ Team India: ಟೆಸ್ಟ್ ಸರಣಿಯಿಂದ ಶಮಿ ಔಟ್; ಏಕದಿನದಿಂದ ಹಿಂದೆ ಸರಿದ ದೀಪಕ್ ಚಹರ್
ಭಾರತದ ನಚ್ಚಿನ ತಾಣ
ಜೊಹಾನ್ಸ್ರ್ಬಗ್ ಭಾರತದ ಪಾಲಿಗೆ ನೆಚ್ಚಿನ ತಾಣವೆನಿಸಿದೆ. ಇಲ್ಲಿ ಮೂರೂ ಮಾದರಿ ಕ್ರಿಕೆಟ್ನಲ್ಲಿಯೂ ಭಾರತ ಉತ್ತಮ ದಾಖಲೆ ಹೊಂದಿದೆ. ಹೀಗಾಗಿ ಇದನ್ನು ಭಾರತದ ಎರಡನೇ ತವರು ಮೈದಾನ ಎಂದು ಕರೆಯುತ್ತಾರೆ. ಉತ್ತಮ ದಾಖಲೆ ಹೊಂದಿರುವ ಕಾರಣ ಭಾರತ ತಂಡದ ಮೇಲೆ ಬಲವಾದ ನಂಬಿಕೆ ಇಡಬಹುದು.
ಕಳೆದ ವರ್ಷ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಮಾಡಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ರಾಹುಲ್ ತಂಡದ ನಾಯಕರಾಗಿದ್ದರು. ಆದರೆ ಇದರಲ್ಲಿ ಭಾರತ ಸೋಲನುಭವಿಸಿತ್ತು. ಇದೀಗ ಮತ್ತೆ ರಾಹುಲ್ ಸಾರಥ್ಯದಲ್ಲಿ ಒಂದು ವರ್ಷಗಳ ಬಳಿಕ ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಏಕದಿನ ಆಡಲಿದೆ. ಹೀಗಾಗಿ ರಾಹುಲ್ ಅವರು ಅಂದಿನ ಸೋಲಿಗೆ ಈ ಬಾರಿ ಸೇಡು ತೀರಿಸಿಕೊಳ್ಳಬೇಕಿದೆ.