ಕೇಪ್ ಟೌನ್: ದಕ್ಷಿಣ ಆಫ್ರಿಕಾ(South Africa vs India, 2nd Test) ವಿರುದ್ಧದ ಮೊದಲ ಟಸ್ಟ್ ಪಂದ್ಯ ಸೋತಿರುವ ಪ್ರವಾಸಿ ಭಾರತ ತಂಡ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಇತ್ತಂಡಗಳ ನಡುವಣ ಈ ಪಂದ್ಯ ಬುಧವಾರ(ನಾಳೆ) ಕೇಪ್ ಟೌನ್ನಲ್ಲಿ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೆ ಭಾರತ ತಂಡ ವಿಶೇಷ ಬ್ಯಾಟಿಂಗ್ ಅಭ್ಯಾಸ ನಡೆಸಿದೆ. ಆದರೆ, ತಂಡದ ಯುವ ಆಟಗಾರ ಶುಭಮನ್ ಗಿಲ್(shubman gill) ಹೆಬ್ಬೆರಳಿನ ಗಾಯಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ಬ್ಯಾಟಿಂಗ್ ಅಭ್ಯಾಸ ನಡೆಸುವ ವೇಳೆ ಶುಭಮನ್ ಗಿಲ್ ಹೆಬ್ಬೆರಳಿನ ಗಾಯಕ್ಕೀಡಾಗಿದ್ದಾರೆ ಎನ್ನಲಾಗಿದೆ. ಗಿಲ್ ಅವರ ಹೆಬ್ಬರಳಿಗೆ ಫಿಸಿಯೊ ಬ್ಯಾಡೆಂಜ್ ಸುತ್ತುತ್ತಿರುವ ಫೋಟೊ ವೈರಲ್ ಆಗಿದೆ. ಫೋಟೊದಲ್ಲಿ ಗಿಲ್ ಗಾಯದಿಂದ ಬಳಲುತ್ತಿರುವಂತೆ ಕಾಣುತ್ತಿದೆ. ಸದ್ಯ ಬಿಸಿಸಿಐ ಗಿಲ್ ಗಾಯಗೊಂಡಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಶುಭಮನ್ ಗಿಲ್ ಮೊದಲ ಪಂದ್ಯದ ಎರಡೂ ಇನಿಂಗ್ಸ್ನಲ್ಲಿಯೂ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾಗಿದ್ದರು. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ಯೋಜನೆಯಲ್ಲಿದ್ದರು. ಇದೇ ವೇಳೆ ಅವರ ಹೆಬ್ಬೆರಳಿಗೆ ಗಾಯವಾಗಿದೆ. ಆದರೆ, ಗಾಯದ ಪ್ರಮಾಣ ಅಥವಾ ಅವರ ಅಲಭ್ಯತೆಯ ಕುರಿತ ಯಾವುದೇ ಅಧಿಕೃತ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.
ಇದನ್ನೂ ಓದಿ IND vs SA: ಹರಿಣ ಪಡೆಯ ಬೌಲಿಂಗ್ ಎದುರಿಸಲು ವಿಶೇಷ ಅಭ್ಯಾಸ ನಡೆಸಿದ ಕೊಹ್ಲಿ
ಶಾರ್ದೂಲ್ ಠಾಕೂರ್ಗೂ ಗಾಯ
ತಂಡದಲ್ಲಿದ್ದ ಏಕಮಾತ್ರ ವೇಗದ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್(Shardul Thakur) ಬ್ಯಾಟಿಂಗ್ ಅಭ್ಯಾಸ ನಡೆಸುವ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದು ದ್ವಿತೀಯ ಟೆಸ್ಟ್ನಿಂದ ಬಹುತೇಕ ಹೊರಬಿಳುವ ಸ್ಥಿತಿಯಲ್ಲಿದ್ದಾರೆ.
ಶನಿವಾರ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುವ ವೇಳೆ ಶಾರ್ದೂಲ್ ಠಾಕೂರ್ ಭುಜದ ಗಾಯಕ್ಕೀಡಾಗಿದ್ದರು. ಬಳಿಕ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಅವರು ಇನ್ನೂ ಕೂಡ ಚೇತರಿಕೆ ಕಂಡಿಲ್ಲ. ಭುಜಕ್ಕೆ ನೋವು ನಿವಾರಕ ಕವರ್ಗಳನ್ನು ಹಾಕಿಯೇ ಇದ್ದಾರೆ. ತಂಡದ ಸಹ ಆಟಗಾರರು ಅಭ್ಯಾಸ ನಡೆಸಿದರೂ ಶಾರ್ದೂಲ್ ಅಭ್ಯಾಸ ನಡೆಸದೆ ಕೈಗೆ ಕವರ್ ಹಾಕಿ ದೂರದಲ್ಲಿ ನಿಂತಿರುವ ಫೋಟೊಗಳು ವೈರಲ್ ಆಗುತ್ತಿದೆ.
ಸದ್ಯಕ್ಕೆ ಶಾರ್ದೂಲ್ ಅವರ ಪರಿಸ್ಥಿತಿಯನ್ನು ನೋಡುವಾಗ ಅವರಿಗೆ ಬೌಲಿಂಗ್ ನಡಸಲು ಅಸಾಧ್ಯ ಎನ್ನುವಂತೆ ಕಂಡುಬಂದಿದೆ. ಶಾರ್ದೂಲ್ ಆಡದಿದ್ದರೆ, ಶಮಿ ಸ್ಥಾನಕ್ಕೆ ಬದಲಿಯಾಗಿ ಆಯ್ಕೆಯಾದ ಅವೇಶ್ ಖಾನ್ ಆಡುವ ಬಳಗದಲ್ಲಿ ಅವಕಾಶ ಪಡೆಯಬಹುದು. ಶಾರ್ದೂಲ್ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಸೇರಿ ಬೌಲಿಂಗ್ನಲ್ಲಿಯೂ ತೀರಾ ಕಳಪೆ ಪ್ರದರ್ಶನ ತೋರಿದ್ದರು.
ಜಡೇಜಾ ಆಡುವ ಸಾಧ್ಯತೆ
ಬೆನ್ನುನೋವಿನ ಸಮಸ್ಯೆಯಿಂದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ(Ravindra Jadeja) ಅವರು ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್(india vs south africa 2nd test) ಪಂದ್ಯದಲ್ಲಿ ಆಡುವ ಸಾಧ್ಯತೆ ಅಧಿಕವಾಗಿದೆ. ಜಡೇಜಾ ಸೋಮವಾರ ತಂಡದ ಸದಸ್ಯರೊಂದಿಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಅಭ್ಯಾಸಗಳನ್ನು ನಡೆಸಿದ್ದಾರೆ. ಅವರ ಆಗಮನದಿಂದ ಅಶ್ವಿನ್ ದ್ವಿತೀಯ ಪಂದ್ಯದಿಂದ ಹೊರಗುಳಿಯಬಹುದು.