ಕೋಲ್ಕೊತಾ: ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್(rahul dravid) ಅವರು ಮಹತ್ವದ ಹೇಳಿಯೊಂದನ್ನು ನೀಡಿದ್ದಾರೆ. ತಂಡಕ್ಕೆ ಆರನೇ ಬೌಲರ್ ಅಗತ್ಯ ಬಿದ್ದರೆ ವಿರಾಟ್ ಕೊಹ್ಲಿ(virat kohli) ಮತ್ತು ಸೂರ್ಯಕುಮಾರ್ ಯಾದವ್(suryakumar yadav) ಇದನ್ನು ನಿಭಾಯಿಸಬಲ್ಲರು ಎಂದು ಹೇಳಿದ್ದಾರೆ.
ದ್ರಾವಿಡ್ ಅವರ ಈ ಹೇಳಿಕೆ ಗಮನಿಸುವಾಗ ಸದ್ಯ ಭಾರತ ತಂಡದಲ್ಲಿ ಯಾವುದೇ ಆಟಗಾರನ ಬದಲಾವಣೆ ಇಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿದೆ. ಪಾಂಡ್ಯ ಅಲಭ್ಯತೆಯಲ್ಲಿ ಕಣಕ್ಕಿಳಿದಿದ್ದ ಸೂರ್ಯಕುಮಾರ್ ಅವರೇ ಮುಂದಿನ ಪಂದ್ಯಗಳಿಗೂ ತಂಡದಲ್ಲಿ ಮುಂದುವರಿಯುವುದು ಖಚಿತ ಎನ್ನುವಂತಿದೆ. ಇದೇ ಕಾರಣಕ್ಕೆ ದ್ರಾವಿಡ್ ಈ ಮಾತನ್ನು ಹೇಳಿದಂತೆ ತೋರುತ್ತಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದ್ರಾವಿಡ್, “ಈ ಹಿಂದೆ ಆರನೇ ಬೌಲರ್ ಆಯ್ಕೆಯಾಗಿ ಹಾರ್ದಿಕ್ ಪಾಂಡ್ಯ ತಂಡದಲ್ಲಿದ್ದರು. ಆದರೆ ಅವರು ಗಾಯಗೊಂಡು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಅನುಪಸ್ಥಿತಿಯಲ್ಲಿಯೂ ಕಳೆದ ನಾಲ್ಕು ಪಂದ್ಯಗಳನ್ನು ಆಡಿ ಗೆದ್ದಿದ್ದೇವೆ. ಆರನೇ ಬೌಲರ್ ಆಯ್ಕೆಯಿಲ್ಲದೇ ನಮ್ಮ ತಂಡ ಉತ್ತಮ ಪ್ರದರ್ಶನ ತೋರುತ್ತಿರುವಾಗ ಇದರ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಲ್ಲ. ಒಂದೊಮ್ಮೆ ಅಗತ್ಯ ಬಿದ್ದರೆ ವಿರಾಟ್ ಕೊಹ್ಲಿ ಅಥವಾ ಸೂರ್ಯಕುಮಾರ್ ಅವರು ಈ ಕೊರತೆಯನ್ನು ನೀಗಿಸಲಬಲ್ಲರು” ಎಂದು ಹೇಳಿದರು.
ಪ್ಲಾನ್ ‘ಬಿ’ ರೆಡಿ
ಆರನೇ ಬೌಲರ್ ಆಗಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಪ್ಲಾನ್ ‘ಬಿ’ ಆಗಿ ಇಟ್ಟಿದ್ದೇವೆ. ಸ್ವಿಂಗ್ ಮಾಡುವ ವಿರಾಟ್ ಬೇಕಿದ್ದರೆ ಕನಿಷ್ಠ 4 ಓವರ್ ಬೌಲಿಂಗ್ ಮಾಡಬಲ್ಲರು. ಅಲ್ಲದೆ ಅವರಿಗೆ ವಿಶ್ವಕಪ್ ಟೂರ್ನಿಯಲ್ಲಿ ಬೌಲಿಂಗ್ ನಡೆಸಿದ ಅನುಭವ ಕೂಡ ಇದೆ. ಮುಂಬೈಯಲ್ಲಿ ನಡೆದಿದ್ದ ಪಂದ್ಯದಲ್ಲಿ ಕೊಹ್ಲಿಗೆ ಬೌಲಿಂಗ್ ನೀಡಬೇಕು ಎಂದು ಪ್ರೇಕ್ಷಕರೇ ಒತ್ತಾಯಿಸಿದ್ದರು. ನಾವು ಬೌಲಿಂಗ್ ಕೊಡುವ ಬಗ್ಗೆ ಯೋಚಿಸಿದ್ದೆವು. ಆದರೆ ಪಂದ್ಯ ಬೇಗ ಮುಗಿಯಿತು. ನಾಯಕ ರೋಹಿತ್ ಶರ್ಮಾ ಕೂಡ ಉತ್ತಮ ಆಫ್ ಸ್ಪಿನ್ ಬೌಲರ್ ಆಗಿದ್ದಾರೆ. ಟೀಮ್ ಇಂಡಿಯಾದ ಆರಂಭಿಕ ದಿನಗಳಲ್ಲಿ ಅವರು ಬೌಲರ್ ಆಗಿಯೇ ತಂಡದಲ್ಲಿ ಗುರುತಿಸಿಕೊಂಡಿದ್ದರು. ಆ ಬಳಿಕ ಅವರು ಬ್ಯಾಟಿಂಗ್ ಭಡ್ತಿ ಪಡೆದು ಆರಂಭಿಕ ಬ್ಯಾಟರ್ ಆಗಿದ್ದು. ಹೀಗಾಗಿ ಇವರು ಕೂಡ ಬೌಲಿಂಗ್ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಸದ್ಯಕ್ಕೆ 6ನೇ ಬೌಲರ್ ಬಗ್ಗೆ ಚಿಂತಿಸಿಲ್ಲ ಎಂದರು.
ಇದನ್ನೂ ಓದಿ Virat Kohli Birthday: 35ನೇ ವರ್ಷಕ್ಕೆ ಕಾಲಿಟ್ಟ ವಿರಾಟ್ ಕೊಹ್ಲಿಯ ಸಾಧನೆಗಳು…
ದ್ರಾವಿಡ್ ಅವರ ಈ ಹೇಳಿಕೆ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಯಾವುದೇ ಬದಲಾವಣೆ ಮಾಡದೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರನ್ನೆ ಕಣಕ್ಕಿಳಿಸುವಂತೆ ತೋರುತ್ತಿದೆ. ಅಲ್ಲದೆ ಅಗ್ರಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಪ್ರಯೋಗಕ್ಕೆ ಮುಂದಾಗುವುದು ಅನುಮಾನ.
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಸ್ಸಿ ವಾನ್ ಡರ್ ಡುಸೆನ್, ಐಡೆನ್ ಮಾರ್ಕ್ರಮ್, ಟೆಂಬ ಬವುಮಾ, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್ಗಿಡಿ, ಜೆರಾಲ್ಡ್ ಕೋಟ್ಜಿ.