ಕೊಲಂಬೊ: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 0-1 ಹಿನ್ನಡೆಯಲ್ಲಿರುವ ಭಾರತ ತಂಡ ನಾಳೆ(ಬುಧವಾರ) ನಡೆಯುವ ಅಂತಿಮ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದೊಂದಿಗೆ ಕಣಕ್ಕಿಳಿಯಲಿದೆ. ದುರ್ಬಲ ಲಂಕಾ ವಿರುದ್ಧ ಸರಣಿ(IND vs SL 3rd ODI) ಸೋಲಿನ ಭೀತಿಯಲ್ಲಿರುವ ರೋಹಿತ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮೊದಲ ಪಂದ್ಯ ಟೈ ಗೊಂಡಿತ್ತು.
ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಒದಗಿಸುತ್ತಿದ್ದರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಯಾರು ಕೂಡ ತಂಡವನ್ನು ಆಧರಿಸಿ ನಿಲ್ಲುತ್ತಿಲ್ಲ. ಬ್ಯಾಟಿಂಗ್ ಮರೆತವರಂತೆ ಬ್ಯಾಟ್ ಬೀಸಿ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ. ಕೊಹ್ಲಿ, ರಾಹುಲ್, ದುಬೆ, ಅಯ್ಯರ್ ಆಡಿದ 2 ಪಂದ್ಯಗಳಲ್ಲಿಯೂ ವೈಫಲ್ಯ ಕಂಡಿದ್ದಾರೆ. ಅಕ್ಷರ್ ಪಟೇಲ್ ಕೆಳ ಕ್ರಮಾಂಕದಲ್ಲಿ ಸಣ್ಣ ಮಟ್ಟಿನ ಬ್ಯಾಟಿಂಗ್ ಹೋರಾಟ ನಡೆಸಿದರೂ ಕೂಡ ಅವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗದ ಕಾರಣ ಪಂದ್ಯವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗುತ್ತಿಲ್ಲ. ಭಾರತದ ಸೋಲಿಗೆ ಪ್ರಮುಖ ಕಾರಣ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ. ನಿರ್ಣಾಯ ಪಂದ್ಯದಲ್ಲಾದರೂ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ.
ಸರಣಿ ಆರಂಭಕ್ಕೂ ಮುನ್ನ ಲಂಕಾ ತಂಡವನ್ನು ದುರ್ಬಲ ತಂಡ, ಭಾರತಕ್ಕೆ ಸವಾಲೊಡ್ಡುವುದು ಕಷ್ಟ ಎಂದು ಊಹಿಸಲಾಗಿತ್ತು. ಜತೆಗೆ ಅನುಭವಿ ಆಟಗಾರರು ಕೂಡ ಗಾಯದಿಂದ ಅಲಭ್ಯರಾಗಿದ್ದರು. ಆದರೆ, ಸನತ್ ಜಯಸೂರ್ಯ ಮಾರ್ಗದರ್ಶನದಲ್ಲಿ ಲಂಕಾ ತಂಡದ ಯುವ ಆಟಗಾರರು ಅಸಾಮಾನ್ಯ ಪ್ರದರ್ಶನ ತೋರುವ ಮೂಲಕ ಬಲಿಷ್ಠ ಭಾರತ ತಂಡಕ್ಕೆ ನೀರು ಕುಡಿಸಿತು. ಭಾರತ ತಂಡದ ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣವಾಯಿತು.
ಇದನ್ನೂ ಓದಿ IND vs SL: ಮೂರನೇ ಏಕದಿನ ಪಂದ್ಯಕ್ಕೆ ರಾಹುಲ್ ಅನುಮಾನ; ಪಂತ್ಗೆ ಅವಕಾಶ?
ಪಿಚ್ ರಿಪೋರ್ಟ್
ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಇದುವರೆಗೆ 150 ಏಕದಿನ ಪಂದ್ಯಗಳು ನಡೆದಿವೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಹೆಚ್ಚು ಬಾರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 80 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ಮಾಡಿದ ತಂಡ ಕೇವಲ 59 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಮೊದಲ ಪಂದ್ಯದಲ್ಲಿ ಸ್ಪಿನ್ನರ್ಗಳು ಪ್ರಭಾವ ಬೀರಿದ್ದರು. ಹೀಗಾಗಿ ಎರಡನೇ ಏಕದಿನ ಪಂದ್ಯದಲ್ಲಿಯೂ ಸ್ಪಿನ್ ಬೌಲರ್ಗಳು ಪ್ರಾಬಲ್ಯ ತೋರುವ ನಿರೀಕ್ಷೆ ಇದೆ. ಪಂದ್ಯ ಸಾಗಿದಂತೆ ಈ ಪಿಚ್ ಅತ್ಯಂತ ತಿರುವ ಪಡೆದುಕೊಳ್ಳಲಿದೆ. ಬ್ಯಾಟಿಂಗ್ ನಡೆಸುವುದೇ ಒಂದು ಸವಾಲಾಗಿರಲಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಬಹುದು.
ಹವಾಮಾನ ವರದಿ
ದ್ವಿತೀಯ ಪಂದ್ಯಕ್ಕೆ ಹವಾಮಾನ ಇಲಾಖೆ ಭಾರೀ ಮಳೆಯ ಎಚ್ಚರಿಕೆ ನೀಡಿತ್ತು. ಆದರೆ, ಪಂದ್ಯಕ್ಕೆ ಯಾವುದೇ ಮಳೆ ಕಾಟ ಎದುರಾಗಿರಲಿಲ್ಲ. ಇದೀಗ ನಾಳೆ ನಡೆಯುವ ಮೂರನೇ ಪಂದ್ಯಕ್ಕೂ ಶೇ.77ರಷ್ಟು ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೀ), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ.
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿಕೀ), ಸದೀರ ಸಮರವಿಕ್ರಮ, ಚರಿತ್ ಅಸಲಂಕ (ನಾಯಕ), ಕಾಮಿಂದು ಮೆಂಡಿಸ್, ಜನಿತ್ ಲಿಯಾನಗೆ, ದುನಿತ್ ವೆಲ್ಲಲಾಗೆ, ಅಕಿಲ ದನಂಜಯ, ಅಸಿತ ಫೆರ್ನಾಂಡೋ, ಜೆಫ್ರಿ ವಂಡರ್ಸೆ.