ಪುಣೆ: ಶ್ರೀಲಂಕಾ(IND VS SL) ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಅಕ್ಷರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಅರ್ಧಶತಕ ಸಿಡಿಸಿ ಮಿಂಚಿದರು. ಇದೇ ವೇಳೆ ಅವರು ಮೂರು ಪ್ರಮುಖ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ಗುರುವಾರ ಪುಣೆಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 206 ರನ್ ಗಳಿಸಿತ್ತು. ಈ ಬೃಹತ್ ಮೊತ್ತ ಬೆನ್ನಟ್ಟಿ ಹೊರಟ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 190 ರನ್ ಗಳಿಸಿ,16 ರನ್ ಅಂತರದಿಂದ ಸೋಲು ಕಂಡಿತು.
ಚೇಸಿಂಗ್ ವೇಳೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಆಲ್ರೌಂಡರ್ ಅಕ್ಷರ್ ಪಟೇಲ್ 31 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್‌ಗಳ ನೆರವಿನಿಂದ 65 ರನ್ ಚಚ್ಚಿ ದಸುನ್ ಶನಕಗೆ ವಿಕೆಟ್ ಒಪ್ಪಿಸಿದರು. ಆದರೆ ಅವರು ಈ ಪಂದ್ಯದಲ್ಲಿ ಮಹತ್ವದ ಮೂರು ದಾಖಲೆಯನ್ನು ಬರೆದಿದ್ದಾರೆ.
ಅಕ್ಷರ್ ಪಟೇಲ್ 20 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ಭಾರತದ ಪರ ವೇಗದ ಅರ್ಧಶತಕ ಸಿಡಿಸಿದ 5ನೇ ಬ್ಯಾಟ್ಸ್‌ಮನ್ ಹಾಗೂ 6ನೇ ಕ್ರಮಾಂಕದ ಕೆಳಗಡೆ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದರು. ಯುವರಾಜ್ ಸಿಂಗ್ (12 ಎಸೆತ), ಕೆ.ಎಲ್.ರಾಹುಲ್ (18 ಎಸೆತ), ಸೂರ್ಯಕುಮಾರ್ ಯಾದವ್ (18 ಎಸೆತ), ಗೌತಮ್ ಗಂಭೀರ್ (19 ಎಸೆತ), ಟೀಮ್ ಇಂಡಿಯಾ ಪರ ವೇಗದ ಅರ್ಧಶತಕ ಸಿಡಿಸಿದ ಉಳಿದ ಆಟಗಾರರಾಗಿದ್ದಾರೆ.
7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡರು. ಈ ಹಿಂದೆ ದಿನೇಶ್ ಕಾರ್ತಿಕ್ 4 ಸಿಕ್ಸರ್ ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಅಕ್ಷರ್ ಪಟೇಲ್ 6 ಸಿಕ್ಸರ್‌ಗಳ ಮೂಲಕ ಈ ದಾಖಲೆಯನ್ನು ಮುರಿದರು.
ಗರಿಷ್ಠ ಗಳಿಕೆಯಲ್ಲೂ ಅಕ್ಷರ್ ದಾಖಲೆಯೊಂದನ್ನು ಬರೆದಿದ್ದಾರೆ. ಈ ಮೂಲಕ ರವೀಂದ್ರ ಜಡೇಜಾ ಅವರ ದಾಖಲೆ ಪತನಗೊಂಡಿದೆ. 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜಡೇಜಾ 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅಜೇಯ 44 ರನ್ ಗಳಿಸಿದ್ದು ಟೀಮ್ ಇಂಡಿಯಾ ಆಟಗಾರನೊಬ್ಬನ ಸಾಧನೆಯಾಗಿತ್ತು. ಇದೀಗ ಅಕ್ಷರ್ ಪಟೇಲ್ ಶ್ರೀಲಂಕಾ ವಿರುದ್ಧ 31 ಎಸೆತಗಳಲ್ಲಿ 65 ರನ್ ಸಿಡಿಸುವ ಮೂಲಕ 7ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ವೈಯಕ್ತಿಕ ಗರಿಷ್ಠ ಮೊತ್ತ ಸಿಡಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ | IND VS SL | ಟಾಸ್ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ನೀಡಿದ ಪ್ರತಿಕ್ರಿಯೆ ವೈರಲ್; ಪಾಂಡ್ಯ ಹೇಳಿದ ಉತ್ತರವಾದರೂ ಏನು?