ಪುಣೆ: ಶ್ರೀಲಂಕಾ ವಿರುದ್ಧ ಗುರುವಾರ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ(IND VS SL) 16 ರನ್ ಅಂತರದ ಸೋಲು ಕಂಡಿದೆ. ಆದರೆ ಟಾಸ್ ವೇಳೆ ನಾಯಕ ಹಾರ್ದಿಕ್ ಪಾಂಡ್ಯ ನೀಡಿದ ಒಂದು ಉತ್ತರ ಇದೀಗ ವೈರಲ್ ಆಗಿದೆ.
ಪುಣೆಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದೇ ವೇಳೆ ಪಂದ್ಯದ ನಿರೂಪಕ ಮುರಳಿ ಕಾರ್ತಿಕ್ ಅವರು ಪಾಂಡ್ಯ ಬಳಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. “ಇತಿಹಾಸ ನೋಡಿದರೆ, ಈ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳೇ ಬಹುತೇಕ ಬಾರಿ ಗೆದ್ದಿದೆ. ಹೀಗಿರುವಾಗ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಳ್ಳಲು ಕಾರಣವೇನು” ಎಂದರು.
ಇದಕ್ಕೆ ಉತ್ತರಿಸಿದ ಪಾಂಡ್ಯ “ಓ ಹೌದಾ ನನಗಿದು ತಿಳಿದಿರಲಿಲ್ಲ” ಎಂದು ಉತ್ತರಿಸಿದರು. ಇದೀಗ ಪಾಂಡ್ಯ ನೀಡಿದ ಈ ಉತ್ತರ ವೈರಲ್ ಆಗಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಂಕಾ ಮೇಲುಗೈ ಸಾಧಿಸಿತು. ಪಾಂಡ್ಯ ಸರಿಯಾಗಿ ಪಿಚ್ ಬಗ್ಗೆ ತಿಳಿಯದೇ ಇದ್ದ ಕಾರಣದಿಂದ ಪಂದ್ಯ ಸೋಲಿಗೆ ಪ್ರಮುಖ ಕಾರಣ ಎನ್ನುವ ಮಾತುಗಳು ಇದೀಗ ಕೇಳಿಬರಲಾರಂಭಿಸಿದೆ. ಟಾಸ್ ಗೆದ್ದು ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುತ್ತಿದ್ದರೆ ಭಾರತ ಗೆಲುವು ದಾಖಲಿಸುತ್ತಿತ್ತು ಎಂದು ನೆಟ್ಟಿಗರು ಇದೀಗ ಪಾಂಡ್ಯ ವಿರುದ್ಧ ಕಿಡಿಕಾರಿದ್ದಾರೆ.
ಇನ್ನಾದರೂ ಹಾರ್ದಿಕ್ ಪಾಂಡ್ಯ ಪಂದ್ಯಕ್ಕೂ ಮುನ್ನ ಮೈದಾನದ ಮತ್ತು ಪಿಚ್ ಬಗೆಗಿನ ಇತಿಹಾಸ ತಿಳಿದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ ಎಂದು ಕೆಲವು ನೆಟ್ಟಿಗರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ | INDvsSL | ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ 16 ರನ್ ಸೋಲು, 1-1 ಅಂತರದಲ್ಲಿ ಸರಣಿ ಸಮಬಲ