ಮುಂಬಯಿ: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಟೀಮ್ ಇಂಡಿಯಾದ ಆಟಗಾರ ದೀಪಕ್ ಹೂಡಾ, ಪಂದ್ಯದ ಮಧ್ಯೆ ತಾಳ್ಮೆ ಕಳೆದುಕೊಂಡು ಅಂಪೈರ್ಗೆ ಬೈದಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಲಂಕಾ ವಿರುದ್ಧ 2 ರನ್ಗಳ ರೋಚಕ ಗೆಲುವು ಸಾಧಿಸಿತು. ಆದರೆ ಭಾರತೀಯ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಕಸುನ್ ರಜಿತಾ ಅವರ ಐದನೇ ಎಸೆತವನ್ನು ಹೂಡಾ ಆಡಲು ಪ್ರಯತ್ನಿಸಿ ವೈಡ್ ಎಂದು ಆಫ್ ಸೈಡ್ ಕಡೆಗೆ ಬಂದರು. ಆದರೆ ಅಂಪೈರ್ ವೈಡ್ ಸಿಗ್ನಲ್ ನೀಡಲಿಲ್ಲ. ಇದು ದೀಪಕ್ ಹೂಡಾ ಅವರನ್ನು ಕೆರಳಿಸಿತು.
ಮುಂದಿನ ಎಸೆತದಲ್ಲಿ ಸಿಂಗಲ್ ಗಳಿಸಿದ ದೀಪಕ್ ಹೂಡಾ ವೈಡ್ ನೀಡದ ಕಾರಣ ಅಂಪೈರ್ ಜತೆ ವಾಗ್ವಾದಕ್ಕಿಳಿದರು. ಈ ವೇಳೆ ಕೆಲವು ನಿಂದನೀಯ ಪದಗಳನ್ನು ಬಳಸಿದಲ್ಲದೆ ಬ್ಯಾಟ್ ಸಹ ತೋರಿಸಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಎಲ್ಲ ಘಟನೆ ನಡೆದರೂ ಸದ್ಯ ಹೂಡಾ ದಂಡದ ಶಿಕ್ಷೆಯಿಂದ ಪಾರಾಗಿದ್ದು ವಿಶೇಷ. ಹೆಚ್ಚಾಗಿ ಪಂದ್ಯದ ವೇಳೆ ಆಟಗಾರರು ಅತಿರೇಕದ ವರ್ತನೆ ತೋರಿದರೆ ಅಂಪೈರ್ಗಳು ದಂಡ ವಿಧಿಸುತ್ತಾರೆ. ಆದರೆ ಹೂಡಾ ವಿಚಾರದಲ್ಲಿ ಹೀಗಾಗಲಿಲ್ಲ.
ಇದನ್ನೂ ಓದಿ | IND VS SL | ಶ್ರೀಲಂಕಾ ವಿರುದ್ಧ ಟಿ20 ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿ ಟೀಮ್ ಇಂಡಿಯಾ!