ಪುಣೆ: ಶ್ರೀಲಂಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ(IND VS SL ) ಬೌಲರ್ಗಳು ಮಾಡಿದ ಎಡವಟ್ಟು ಪ್ರಮುಖ ಕಾರಣ ಎಂದು ಹಲವು ಕಡೆಯಿಂದ ಟೀಕೆಗಳು ವ್ಯಕ್ತವಾಗಿದೆ. ಸ್ವತಃ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಈ ವಿಚಾರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಯುವ ಬೌಲರ್ಗಳ ಬೆಂಬಲಕ್ಕೆ ನಿಂತಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, ಸದ್ಯ ಟೀಮ್ ಇಂಡಿಯಾದಲ್ಲಿ ಆಡುತ್ತಿರುವುದು ಯುವ ಬೌಲರ್ಗಳು. ಅವರು ಇನ್ನೂ ಕಲಿಕೆಯ ಹಾದಿಯಲ್ಲಿದ್ದಾರೆ. ಈ ವೇಳೆ ತಪ್ಪುಗಳು ಸಹಜ. ಹೀಗಾಗಿ ತಾಳ್ಮೆಯಿಂದ ಇರುವಂತೆ ಟೀಕೆ ಮಾಡುವವರಿಗೆ ಸೂಕ್ತ ಸಲಹೆ ನೀಡಿದ್ದಾರೆ. ಜತೆಗೆ ಯುವ ಬೌಲರ್ಗಳ ಬೆಂಬಲಕ್ಕೆ ನಿಂತು ಅವರ ಆತ್ಮವಿಶ್ವಾಸ ಕುಗ್ಗದಂತೆ ಜಾಣ್ಮೆ ತೋರಿದ್ದಾರೆ.
“ಈ ಚಿಕ್ಕ ಹುಡುಗರ ಬಗ್ಗೆ ನಾವು ತಾಳ್ಮೆಯಿಂದ ಇರಬೇಕು. ಭಾರತ ತಂಡದಲ್ಲಿ ಬಹಳಷ್ಟು ಯುವಕರು ಆಡುತ್ತಿದ್ದಾರೆ. ವಿಶೇಷವಾಗಿ ನಮ್ಮ ಬೌಲಿಂಗ್ ದಾಳಿ ಸಂಪೂರ್ಣ ಯುವ ಆಟಗಾರರನ್ನು ಹೊಂದಿದೆ. ಅವರಿನ್ನೂ ಚಿಕ್ಕವರು. ಈ ರೀತಿಯ ಆಟಗಳು ನಡೆಯಬಹುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಕಲಿಕೆಯ ಹಾದಿಯಲ್ಲಿ ಇವೆಲ್ಲ ಸಾಮಾನ್ಯ. ಈ ಹಂತದಲ್ಲಿ ನಾವು ಆಟಗಾರರ ಬೆಂಬಲಕ್ಕೆ ನಿಲ್ಲಬೇಕು ಹೊರತು ದೂಷಿಸುವುದು ಸರಿಯಲ್ಲ” ಎಂದು ದ್ರಾವಿಡ್ ಹೇಳಿದ್ದಾರೆ.
ಈ ಪಂದ್ಯದಲ್ಲಿ ಅರ್ಶ್ದೀಪ್ ಸಿಂಗ್ ಹ್ಯಾಟ್ರಿಕ್ ಸಹಿತ ಒಟ್ಟು 5 ನೋಬಾಲ್ ಎಸೆದು ಎರಡು ಓವರ್‌ಗಳಲ್ಲಿ 37 ರನ್‌ಗಳನ್ನು ಬಿಟ್ಟು ದುಬಾರಿಯಾಗಿದ್ದರು. ಜತೆಗೆ ಉಮ್ರಾನ್ ಮಲಿಕ್ ಮತ್ತು ಶಿವಂ ಮಾವಿ ತಲಾ ಒಂದು ನೋಬಾಲ್ ಎಸೆದಿದ್ದರು. ಇದುವೇ ಸೋಲಿಗೆ ಪ್ರಮುಖ ಕಾರಣ ಎಂದು ಟೀಮ್ ಇಂಡಿಯಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ | IND VS SL | ನೋಬಾಲ್ ಎಸೆಯುವುದು ಅಪರಾಧ; ಪಾಂಡ್ಯ ಹೀಗೆ ಹೇಳಿದ್ದು ಯಾರಿಗೆ?