Site icon Vistara News

IND vs SL: ವ್ಹಾವ್‌…ಶ್ರೀಲಂಕಾ ವಿರುದ್ಧ ಟೀಮ್‌ ಇಂಡಿಯಾದ ದಾಖಲೆಯ ಗೆಲುವು ಸಂಭ್ರಮಿಸಿದ ಕೇಂದ್ರ ಸಚಿವ

india victory

india victory

ನವ ದೆಹಲಿ: ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ತನ್ನ ಜೈತ್ರಯಾತ್ರೆಯನ್ನು ಮುಂದುವರಿಸಿದೆ. ಗುರುವಾರ(ನವೆಂಬರ್‌ 2) ನಡೆದ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ (IND vs SL) ವಿರುದ್ಧ ದಾಖಲೆಯ 302 ರನ್​ಗಳ ಗೆಲುವು ಸಾಧಿಸಿ ಮೊದಲ ತಂಡವಾಗಿ ಸೆಮಿ ಫೈನಲ್‌ ಪ್ರವೇಶಿಸಿದೆ. ಭಾರತದ ಈ ಸಾಧನೆಗೆ ಅಭಿಮಾನಿಗಳು, ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಕೂಡ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಭಾರತದ ಸಾಧನೆಯನ್ನು ಕೊಂಡಾಡಿದ್ದಾರೆ.

ʼʼತುಂಬಾ ಚೆನ್ನಾಗಿದೆ. ವ್ಹಾವ್‌ʼʼ ಎಂದು ಪಿಯೂಷ್‌ ಗೋಯಲ್‌ ಬರೆದುಕೊಂಡಿದ್ದಾರೆ. ಜತೆಗೆ ಸೋಷಿಯಲ್‌ ಮೀಡಿಯಾದ ತುಂಬ ಮೀಮ್ಸ್‌ಗಳು ಹರಿದಾಡುತ್ತಿವೆ. ಹಲವರಂತೂ ಶ್ರೀಲಂಕಾ ತಂಡವನ್ನು ಟ್ರೋಲ್‌ ಮಾಡುತ್ತಿದ್ದಾರೆ.

ಮುಂಬೈಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತ, ವಿರಾಟ್​ ಕೊಹ್ಲಿ (88), ಶುಭಮನ್​ ಗಿಲ್(92)​ ಮತ್ತು ಶ್ರೇಯಸ್​ ಅಯ್ಯರ್(82)​ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 357 ರನ್​ ಗಳಿಸಿತು. ಬೃಹತ್‌ ಗುರಿ ಬೆನ್ನಟ್ಟಿದ ಲಂಕಾ ನಾಟಕೀಯ ಕುಸಿತ ಕಂಡು 19.4 ಓವರ್​ಗಳಲ್ಲಿ 55 ರನ್​ಗೆ ಆಲೌಟ್​ ಆಗಿ ಹೀನಾಯ ಸೋಲಿಗೆ ತುತ್ತಾಯಿತು. ಭಾರತ ತಂಡ ಈ ಗೆಲುವಿನೊಂದಿಗೆ ಅಜೇಯ 7 ಗೆಲುವು ಸಾಧಿಸಿ 14 ಅಂಕದೊಂದಿಗೆ ಪಾಯಿಂಟ್‌ ಟೇಬಲ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.

ಶ್ರೀಲಂಕಾ ತಂಡಕ್ಕೆ ಜಸ್​ಪ್ರೀತ್​ ಬುಮ್ರಾ ಮೊದಲ ಎಸೆತದಲ್ಲೇ ಶಾಕ್​ ನೀಡಿದರು. ಪಾಥುಮ್ ನಿಸ್ಸಾಂಕ ಅವರನ್ನು ಎಲ್​ಬಿಡಬ್ಲ್ಯು ಬಲೆಗೆ ಬೀಳಿಸಿದರು. ಮುಂದಿನ ಓವರ್​ನಲ್ಲಿ ಸಿರಾಜ್​ ಒಂದರ ಹಿಂದೆ ಒಂದು ವಿಕೆಟ್​ ಕಿತ್ತು ಶ್ರೀಲಂಕಾ ತಂಡಕ್ಕೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಏಷ್ಯಾಕಪ್ ಫೈನಲ್​ನಲ್ಲಿಯೂ ಸಿರಾಜ್​ ಇದೇ ರೀತಿ ಲಂಕಾ ಆಟಗಾರರ ವಿಕೆಟ್​ ಕಿತ್ತು ಮಿಂಚಿದ್ದರು.

ಇತ್ತ ಮೊಹಮ್ಮದ್​ ಶಮಿ 10ನೇ ಓವರ್​ನಲ್ಲಿ ಕಣಕ್ಕಿಳಿದು ಸತತ ಎರಡು ವಿಕಟ್​ ಕಿತ್ತರು. ಲಂಕಾ 10 ಓವರ್​ಗೆ 14 ರನ್​ ಗಳಿಸಿ 6 ವಿಕೆಟ್​ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಸಿರಾಜ್​ ಏಷ್ಯಾಕಪ್​ ಫೈನಲ್​ನಲ್ಲಿ ಲಂಕಾ ವಿರುದ್ಧ 21 ರನ್​ಗೆ 6 ವಿಕೆಟ್​ ಕಿತ್ತಿದ್ದರು. ಈ ಪಂದ್ಯದಲ್ಲಿ ಮೂರು ವಿಕೆಟ್​ ಪಡೆದರು.

ಶಮಿ ಈ ಪಂದ್ಯದಲ್ಲಿ ವಿಕಟ್​ 5 ಕಿತ್ತು ವಿಶ್ವಕಪ್​ನಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಜಹೀರ್​ ಖಾನ್​ ಮತ್ತು ಜಾವಗಲ್​ ಶ್ರೀನಾಥ್​ ಅವರ 44 ವಿಕೆಟ್​ಗಳ ದಾಖಲೆಯನ್ನು ಮುರಿದರು. ಸದ್ಯ ಶಮಿ 45 ವಿಕೆಟ್​ ಪಡೆದಿದ್ದಾರೆ. ಶ್ರೀಲಂಕಾ ಪರ ದಿಲ್ಶನ್ ಮಧುಶಂಕ 80 ರನ್​ ವೆಚ್ಚದಲ್ಲಿ 5 ವಿಕೆಟ್​ ಕಿತ್ತರು.

ಶ್ರೀಲಂಕಾ ವಿರುದ್ಧ ಭಾರತ ತಂಡ ಬೃಹತ್​ ಮೊತ್ತ ಪೇರಿಸುವ ಮೂಲಕ ವಿಶ್ವಕಪ್​ನಲ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದೆ. ವೈಯಕ್ತಿಕ ಶತಕವಿಲ್ಲದೆ ಹೆಚ್ಚಿನ ಸ್ಕೋರ್‌ ಬಾರಿಸಿದ ಮೊದಲ ತಂಡ ಎಂಬ ದಾಖಲೆ ಬರೆದಿದೆ. ಈ ಮೂಲಕ ಪಾಕಿಸ್ತಾನದ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದೆ. ಭಾರತ 8 ವಿಕೆಟ್​ ನಷ್ಟಕ್ಕೆ 357 ರನ್​ ಗಳಿಸಿತು. 2019ರ ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್​ ವಿರುದ್ಧ 8 ವಿಕೆಟ್​ಗೆ 348 ರನ್​ ಬಾರಿಸಿತ್ತು.

ಇದನ್ನೂ ಓದಿ: World Cup Points Table: ಮತ್ತೆ ಅಗ್ರಸ್ಥಾನಕ್ಕೇರಿದ ಭಾರತ

Exit mobile version