ಕೊಲಂಬೊ: ಪಾಕಿಸ್ತಾನ ವಿರುದ್ಧ ಸೋಮವಾರ ನಡೆದ ಸೂಪರ್-4 ಪಂದ್ಯದಲ್ಲಿ ಭಾರತ ತಂಡ 228 ರನ್ಗಳ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ(Asia Cup 2023) ಏರಿದೆ. ಇದೀಗ ಮಂಗಳವಾರ ಹಾಲಿ ಚಾಂಪಿಯನ್ ಶ್ರೀಲಂಕಾ(India vs Sri Lanka) ವಿರುದ್ಧ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದೆ. ಆದರೆ ಈ ಪಂದ್ಯಕ್ಕೂ ಮಳೆಯ ಭೀತಿ ಕಾಡುವುದು ಖಚಿತ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಪಂದ್ಯದ ಪಿಚ್ ರಿಪೋರ್ಟ್ ಮತ್ತು ಉಭಯ ತಂಡಗಳ ಮಾಹಿತಿ ಇಂತಿದೆ.
ಪಿಚ್ ರಿಪೋರ್ಟ್
ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದ(R.Premadasa Stadium) ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಇಲ್ಲಿ ಸ್ಪಿನ್ನರ್ಗಳೇ ಹೆಚ್ಚು ದಾಖಲೆಯನ್ನು ಹೊಂದಿದ್ದಾರೆ. ಇದಕ್ಕೆ ಕಳೆದ ಪಾಕ್ ಪಂದ್ಯವೇ ಉತ್ತಮ ನಿದರ್ಶನ. ಕುಲ್ದೀಪ್ ಯಾದವ್ 5 ವಿಕೆಟ್ ಕಿತ್ತು ಮೆರೆದಾಡಿದ್ದರು. ಹೀಗಾಗಿ ಈ ಪಂದ್ಯದಲ್ಲೂ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ. ಶ್ರೀಲಂಕಾ ಪರ ಕೂಡ ಉತ್ತಮ ಸ್ಪಿನ್ ಬೌಲರ್ಗಳಿದ್ದಾರೆ. ಒಟ್ಟಾರೆ ಈ ಪಂದ್ಯದಲ್ಲಿ ಸ್ಪಿನ್ ಮೋಡಿ ಮಾಡುವುದರಲ್ಲಿ ಅನುಮಾನವಿಲ್ಲ. ಪವರ್ ಪ್ಲೇಯಲ್ಲಿ ಬ್ಯಾಟರ್ಗಳು ಹೆಚ್ಚಿನ ರನ್ ಗಳಿಸಿದರೆ ಮುನ್ನಡೆ ಸಾಧಿಸಬಹುದು. ಸ್ಲೋ ಬಾಲ್ ಎಸೆಯುವ ಬೌರ್ಗಳಿಗೂ ಇಲ್ಲಿನ ಪಿಚ್ ಸಹಾಯಕಾರಿ. ಇಲ್ಲಿನ ಬೌಂಡರಿಗಳು ವಿಶೇಷವಾಗಿ ವಿಸ್ತಾರವಾಗಿಲ್ಲ, ಮತ್ತು ಔಟ್‌ಫೀಲ್ಡ್ ಸಾಕಷ್ಟು ವೇಗವಾಗಿದ್ದು ಬ್ಯಾಟಿಂಗ್ ಪರಿಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಲಿದೆ.
ಹವಾಮಾನ ವರದಿ
ಪಾಕಿಸ್ತಾನ ಪಂದ್ಯದಂತೇ ಈ ಪಂದ್ಯಕ್ಕೂ ಮಳೆಯ ಕಣ್ಣಾಮುಚ್ಚಾಲೆ ಆಟ ಇರಲಿದೆ. ಈಗಾಗಲೇ ಹವಾಮಾನ ಇಲಾಖೆ ತಿಳಿಸಿರುವಂತೆ ಈ ಪಂದ್ಯಕ್ಕೂ ಶೇ.70 ರಷ್ಟು ಮಳೆ ಬರುವ ಸಾಧ್ಯತೆ ಇದೆ. ಒಂದೊಮ್ಮೆ ಮಳೆ ಬಂದರೆ ಈ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಹೀಗಾಗಿ ಪಂದ್ಯ ನಡೆಯದೇ ಹೋದರೆ ಉಭಯ ತಂಡಗಳಿಗೆ ಒಂದು ಅಂಕ ನೀಡಲಾಗುತ್ತದೆ. ಪಂದ್ಯ ರದ್ದಾದರು ಭಾರತಕ್ಕೆ ಯಾವುದೇ ನಷ್ಟ ಸಂಭವಿಸದು. ಏಕೆಂದರೆ ಭಾರತ ಬಹುತೇಕ ಫೈನಲ್ ಪ್ರವೇಶ ಖಚಿತವಾಗುತ್ತದೆ.
ಮುಖಾಮುಖಿ
ಭಾರತ ಮತ್ತು ಶ್ರೀಲಂಕಾ ತಂಡಗಳು ಇದುವರೆಗೆ ಏಷ್ಯಾಕಪ್ನಲ್ಲಿ ಒಟ್ಟು 21 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಶ್ರೀಲಂಕಾ ತಂಡ 11 ಪಂದ್ಯ ಗೆದ್ದರೆ ಭಾರತ 10 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಬಲಾಬಲದ ಆದಾರದಲ್ಲಿ ಲಂಕಾ ತಂಡ ಭಾರತಕ್ಕಿಂತ ಮುಂದಿದೆ. ಅಲ್ಲದೆ ತವರಿನಲ್ಲೇ ಪಂದ್ಯ ನಡೆಯುತ್ತಿರುವುದು ಕೂಡ ಶನಕ ಪಡೆಗೆ ಹೆಚ್ಚಿನ ಲಾಭ ದೊರೆಯಲಿದೆ. ಹೀಗಾಗಿ ಭಾರತ ಈ ಸವಾಲನ್ನು ಹಗುರವಾಗಿ ಪರಿಗಣಿಸಬಾರದು.
ಇದನ್ನೂ ಓದಿ ind vs pak : ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕ್ ವಿರುದ್ಧ ಚಾರಿತ್ರಿಕ 228 ರನ್ ಗೆಲುವು ಸಾಧಿಸಿದ ಭಾರತ
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ,,ಕೆ.ಎಲ್ ರಾಹುಲ್(ವಿಕೆಟ್ ಕೀಪರ್),ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್.
ಶ್ರೀಲಂಕಾ:
ದಸುನ್ ಶಾನಕ (ನಾಯಕ), ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್ (ಉಪನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದುನಿತ್ ವೆಲ್ಲಲಗೆ, ಮಥೀಶ ಪತಿರಾಣ, ಕಸುನ್ ರಜಿತ, ಮಹೀಶ್ ತೀಕ್ಷಣ.