ಕೊಲಂಬೊ: ಶ್ರೀಲಂಕಾ ತಂಡ ಭಾನುವಾರ ಭಾರತ ವಿರುದ್ಧ ಏಷ್ಯಾಕಪ್(IND vs SL) ಫೈನಲ್ ಆಡಲು ಸಿದ್ಧವಾಗಿದೆ. ಆದರೆ ಪಂದ್ಯಕ್ಕೂ ಮುನ್ನವೇ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಸ್ಟಾರ್ ಸ್ಪಿನ್ನರ್ ಮಹೀಶ್ ತೀಕ್ಷಣ(Maheesh Theekshana) ಮಂಡಿರಜ್ಜು ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಪಾಕಿಸ್ತಾನ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಫಿಲ್ಡಿಂಗ್ ವೇಳೆ ಮಹೀಶ್ ತೀಕ್ಷಣ ಗಾಯಗೊಂಡಿದ್ದರು. ಮಂಡಿ ನೋವಿನ ಮಧ್ಯೆಯೂ ಅವರು ಪಂದ್ಯವನ್ನಾಡಿದ್ದರು. ಗಾಯದ ಸ್ವರೂಪ ಗಂಭೀರವಾದ ಪರಿಣಾಮ ವೈದ್ಯಕೀಯ ಸಲಹೆಯಂತೆ ಅವರನ್ನು ಟೂರ್ನಿಯಿಂದ ಕೈಬಿಡಲಾಗಿದೆ. ಅವರ ಅಲಭ್ಯತೆಯನ್ನು ಲಂಕಾ ಕ್ರಿಕೆಟ್ ಮಂಡಳಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕೂಡ ಖಚಿತಪಡಿಸಿದೆ.
ಮಹೀಶ್ ತೀಕ್ಷಣ ಈ ಬಾರಿಯ ಏಷ್ಯಾಕಪ್ನಲ್ಲಿ 5 ಪಂದ್ಯಗಳನ್ನು ಆಡಿ 8 ವಿಕೆಟ್ಗಳನ್ನು ಕಬಳಿಸಿದ್ದಾರೆ. ಒಟ್ಟು 45.1 ಓವರ್ಗಳನ್ನು ಎಸೆದಿದ್ದು 5.16 ಸರಾಸರಿಯಲ್ಲಿ 271 ರನ್ ಬಿಟ್ಟುಕೊಟ್ಟಿದ್ದಾರೆ. ವನಿಂದು ಹಸರಂಗ(Wanindu Hasaranga), ದುಷ್ಮಂತ ಚಮೀರಾ(Dushmantha Chameera), ದಿಲ್ಶನ್ ಮಧುಶಂಕ(Lahiru Madushanka) ಹಾಗೂ ಲಹಿರು ಕುಮಾರ(Lahiru Kumara) ಅವರ ಅಲಭ್ಯತೆಯ ಮಧ್ಯೆಯೂ ಲಂಕಾ ಫೈನಲ್ ತಲುಪುಪಿದ್ದು ನಿಜಕ್ಕೂ ಸಾಹಸ. ಇದೀಗ ಲಭ್ಯವಿದ್ದ ಅನುಭವಿ ಆಟಗಾರನೂ ಗಾಯಗೊಂಡಿರುವುದು ತಂಡಕ್ಕೆ ಚಿಂತೆಗೀಡು ಮಾಡಿದೆ.
ಲಂಕಾ ತಂಡ
ದಸುನ್ ಶಣಕ (ನಾಯಕ), ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಪೆರೇರ, ಕುಸಾಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ದುನಿತ್ ವೆಲ್ಲಲಗೆ, ಮಥೀಶ ಪತಿರಾಣ, ಕಸುನ್ ರಜಿತ, ದುಶನ್ ಹೇಮಂತ, ಬಿನೂರ ಫರ್ನಾಂಡೊ, ಪ್ರಮೋದ್ ಮಧುಶನ್.
ಇದನ್ನೂ ಓದಿ IND vs SL: ಭಾರತ-ಲಂಕಾ ಫೈನಲ್ ಫೈಟ್; ಉಭಯ ತಂಡಗಳ ಏಷ್ಯಾಕಪ್ ಇತಿಹಾಸ ಬಲು ರೋಚಕ!
ಅಕ್ಷರ್ ಪಟೇಲ್ಗೂ ಗಾಯ
ಭಾರತ ತಂಡದ ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ ಕೂಡ ಗಾಯಗೊಂಡಿದ್ದು ಅವರು ಕೂಡ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ. ಅವರ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್ ಆಯ್ಕೆಯಾಗಿದ್ದಾರೆ ಎಂದು ಕ್ರಿಕ್ಇನ್ಫೋ ವರದಿ ಮಾಡಿದೆ. ಶುಕ್ರವಾರ ನಡೆದ ಬಾಂಗ್ಲಾದೇಶ ವಿರುದ್ಧದ ಅಂತಿಮ ಸೂಪರ್ 4 ಪಂದ್ಯದಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ಮೊಣಕೈ ಮತ್ತು ಸ್ನಾಯು ಸೆಳೆತದ ಮಧ್ಯೆಯೂ ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು.
ಪದೇಪದೆ ನೋವು ನಿವಾರಕ ಸ್ಪ್ರೇ ಬಳಸಿ ಆಟವಾಡಿದ್ದರು. ಆದರೆ ಅವರಿಗೆ ಮತ್ತೊಂದು ತುದಿಯಲ್ಲಿ ಸರಿಯಾದ ಬೆಂಬಲ ಸಿಗದೆ ಪಂದ್ಯ ಸೋಲು ಕಂಡಿತು. 2 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ 42 ರನ್ ಬಾರಿಸಿ ಮುಸ್ತಫಿಜುರ್ ರೆಹಮಾನ್ಗೆ ವಿಕೆಟ್ ಒಪ್ಪಿಸಿದರು. ಅವರ ವಿಕೆಟ್ ಪತನಗೊಳ್ಳುತ್ತಲೇ ಭಾರತ ತಂಡದ ಸೋಲು ಕೂಡ ಖಚಿತಗೊಂಡಿತು.