ಕೊಲಂಬೊ: ಈಗಾಗಲೇ ಹಲವು ಸ್ಟಾರ್ ಆಟಗಾರರನ್ನು ಗಾಯದಿಂದಾಗಿ ಕಳೆದುಕೊಂಡಿರುವ ಶ್ರೀಲಂಕಾ(IND vs SL) ತಂಡಕ್ಕೆ ಮತ್ತೆ ಗಾಯದ ಮೇಲೆ ಬರೆ ಬಿದ್ದಿದೆ. ಅನುಭವಿ ಹಾಗೂ ಸ್ಟಾರ್ ಸ್ಪಿನ್ ಆಲ್ರೌಂಡರ್ ವನಿಂದು ಹಸರಂಗ(wanindu hasaranga) ಗಾಯದಿಂದಾಗಿ ಇಂದು ನಡೆಯುವ ದ್ವಿತೀಯ ಏಕದಿನ ಪಂದ್ಯಕ್ಕೂ ಮುನ್ನವೇ ಸರಣಿಯಿಂದ ಹೊರಬಿದ್ದಿದ್ದಾರೆ.
ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಸರಂಗ ಭಾರತ ವಿರುದ್ಧದ ಇನ್ನುಳಿದ 2 ಏಕದಿನ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಹೇಳಿಕೆಯಲ್ಲಿ ಪ್ರಕಟಿಸಿದೆ. ಮೊದಲ ಪಂದ್ಯದಲ್ಲಿ ಹಸರಂಗ 24 ರನ್ ಮತ್ತು 3 ವಿಕೆಟ್ ಕಿತ್ತು ಪಂದ್ಯವನ್ನು ಸೋಲಿನ ಭೀತಿಯಿಂದ ಪಾರು ಮಾಡಿದವರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಇದೀಗ ಗಾಯದಿಂದ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಇದಕ್ಕೂ ಮುನ್ನ ದಿಲ್ಶಾನ್ ಮಧುಶಂಕ, ಮಥೀಶ ಪತಿರಾಣ, ದುಷ್ಮಂತ ಚಮೀರ, ನುವಾನ್ ತುಷಾರ ಗಾಯದಿಂದಾಗಿ ಸರಣಿಗೆ ಅಲಭ್ಯರಾಗಿದ್ದರು. ಹಸರಂಗ ಸೇರಿ ಒಟ್ಟು 5 ಮಂದಿ ಸರಣಿಯಿಂದ ಹೊರಗುಳಿದರು.
ಪಂದ್ಯಕ್ಕೆ ಮಳೆ ಭೀತಿ
ಇಂದು ನಡೆಯುವ ಭಾರತ ಮತ್ತು ಶ್ರೀಲಂಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯಕ್ಕೆ ಭಾರೀ ಮಳೆ ಭೀತಿ ಎದುರಾಗಿದೆ. ಕೊಲಂಬೊದಲ್ಲಿ(Colombo weather report) ಶನಿವಾರ ಸಂಜೆಯ ವೇಳೆ ಭಾರೀ ಮಳೆಯಾಗಿತ್ತು. ಹೀಗಾಗಿ ಭಾನುವಾರವೂ ಶೇ. 89 ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಗಲು ರಾತ್ರಿಯ ಪಂದ್ಯವಾದ ಕಾರಣ ದ್ವಿತೀಯ ಇನಿಂಗ್ಸ್ ವೇಳೆ ಮಳೆಯಾಗುವ ಸಾಧ್ಯತೆ ಅಧಿಕ.
ಪಿಚ್ ರಿಪೋರ್ಟ್
ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಇದುವರೆಗೆ 150 ಏಕದಿನ ಪಂದ್ಯಗಳು ನಡೆದಿವೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಹೆಚ್ಚು ಬಾರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 80 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ಮಾಡಿದ ತಂಡ ಕೇವಲ 59 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಮೊದಲ ಪಂದ್ಯದಲ್ಲಿ ಸ್ಪಿನ್ನರ್ಗಳು ಪ್ರಭಾವ ಬೀರಿದ್ದರು. ಹೀಗಾಗಿ ಎರಡನೇ ಏಕದಿನ ಪಂದ್ಯದಲ್ಲಿಯೂ ಸ್ಪಿನ್ ಬೌಲರ್ಗಳು ಪ್ರಾಬಲ್ಯ ತೋರುವ ನಿರೀಕ್ಷೆ ಇದೆ. ಪಂದ್ಯ ಸಾಗಿದಂತೆ ಈ ಪಿಚ್ ಅತ್ಯಂತ ತಿರುವ ಪಡೆದುಕೊಳ್ಳಲಿದೆ. ಬ್ಯಾಟಿಂಗ್ ನಡೆಸುವುದೇ ಒಂದು ಸವಾಲಾಗಿರಲಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಬಹುದು.
ಶ್ರೀಲಂಕಾ: ಅವಿಷ್ಕ ಫೆರ್ನಾಂಡೋ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕ (ನಾಯಕ), ಜನಿತ್ ಲಿಯಾನಗೆ, ದುನಿತ್ ವೆಲ್ಲಲಾಗೆ, ಜೆಫ್ರಿ ವಾಂಡರ್ಸೆ, ಅಕಿಲ ದನಂಜಯ, ಮೊಹಮ್ಮದ್ ಶಿರಾಜ್/ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೋ.
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೀ), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.