Site icon Vistara News

IND vs SL: ಗ್ಲೆನ್​ ಮ್ಯಾಕ್ಸ್​ವೆಲ್​ ಟಿ20 ವಿಶ್ವ ದಾಖಲೆ ಮುರಿದ ಸೂರ್ಯಕುಮಾರ್

IND vs SL

IND vs SL: Suryakumar Yadav breaks Glenn Maxwell world record

ಪಲ್ಲೆಕೆಲೆ: ಶನಿವಾರ ನಡೆದಿದ್ದ ಶ್ರೀಲಂಕಾ(IND vs SL) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಇದೇ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿ ಅರ್ಧಶತಕ ಬಾರಿಸಿದ ಟೀಮ್​ ಇಂಡಿಯಾದ ನೂತನ ನಾಯಕ ಸೂರ್ಯಕುಮಾರ್​ ಯಾದವ್(​Suryakumar Yadav) ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ ಭಾರತ ತಂಡಕ್ಕೆ ಆರಂಭಿಕರಾದ ಜೈಸ್ವಾಲ್‌-ಗಿಲ್‌ ಸೇರಿಕೊಂಡು ಲಂಕಾ ದಾಳಿಯನ್ನು ಪುಡಿಗಟ್ಟಿದರು. ಆ ಬಳಿಕ ನಾಯಕ ಸೂರ್ಯಕುಮಾರ್​ ಬ್ಯಾಟಿಂಗ್​ ಅಬ್ಬರ ಆರಂಭವಾಯಿತು. ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸೂರ್ಯ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 200+ ಸ್ಟ್ರೈಕ್ ರೇಟ್​ನಲ್ಲಿ ಅತೀ ಹೆಚ್ಚು ಬಾರಿ 50+ ಸ್ಕೋರ್​ಗಳಿಸಿದ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಈ ವೇಳೆ ಆಸ್ಟ್ರೇಲಿಯಾದ ಗ್ಲೆನ್​ ಮ್ಯಾಕ್ಸ್​ವೆಲ್​ ದಾಖಲೆ ಪತನಗೊಂಡಿತು.

ಮ್ಯಾಕ್ಸ್​ವೆಲ್(Glenn Maxwell)​ ಒಟ್ಟು 8 ಬಾರಿ 200+ ಸ್ಟ್ರೈಕ್ ರೇಟ್​ನಲ್ಲಿ ಅರ್ಧಶತಕಕ್ಕಿಂತ ಹೆಚ್ಚಿನ ರನ್ ಕಲೆಹಾಕಿದ್ದರು. ಆದರೆ, ಇದೀಗ ಸೂರ್ಯಕುಮಾರ್ 66 ಇನಿಂಗ್ಸ್ ಆಡಿ 9 ಬಾರಿ 200+ ಸ್ಟ್ರೈಕ್ ರೇಟ್​ನಲ್ಲಿ 50 ಕ್ಕಿಂತ ಹೆಚ್ಚಿನ ರನ್ ಬಾರಿಸುವ ಮೂಲಕ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಸೂರ್ಯ ಈ ಪಂದ್ಯದಲ್ಲಿ 26 ಎಸೆತಗಳಿಂದ 58 ರನ್​ ಚಚ್ಚಿದರು. ಅವರ ಈ ಅಬ್ಬರದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್​ ಸಿಡಿಯಿತು.

ಇದನ್ನೂ ಓದಿ INDW vs SLW Final: ಇಂದು ಭಾರತ-ಲಂಕಾ ಏಷ್ಯಾ ಕಪ್​ ಫೈನಲ್​; 8ನೇ ಟ್ರೋಫಿ ಮೇಲೆ ಕಣ್ಣಿಟ್ಟ ಹರ್ಮನ್​ಪ್ರೀತ್​​ ಪಡೆ  

ಕೊಹ್ಲಿ ದಾಖಲೆ ಸರಿಗಟ್ಟಿದ ಸೂರ್ಯ


ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಸೂರ್ಯಕುಮಾರ್​ ಅವರು ವಿರಾಟ್​ ಕೊಹ್ಲಿ ದಾಖಲೆಯೊಂದನ್ನು ಸರಿಗಟ್ಟಿದರು. ಹೌದು, ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದರು. ಕೊಹ್ಲಿ ಮತ್ತು ಸೂರ್ಯ ಒಟ್ಟು 16 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಸೂರ್ಯ ಅವರು 69 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರೆ, ಕೊಹ್ಲಿ 125 ಪಂದ್ಯಗಳನ್ನು ಆಡಿದ್ದಾರೆ.

ಮೊದಲು ಬ್ಯಾಟಿಂಗ್​ ನಡೆಸಿದ ಭಾರತ 7 ವಿಕೆಟಿಗೆ 213 ರನ್‌ ಪೇರಿಸಿದರೆ, ಶ್ರೀಲಂಕಾ 19.2 ಓವರ್‌ಗಳಲ್ಲಿ 170ಕ್ಕೆ ಆಲೌಟ್‌ ಆಯಿತು. ಭಾರತ 43 ರನ್ನುಗಳ ಗೆಲುವು ಸಾಧಿಸಿತು. ಲಂಕಾ ತಂಡದ ಆರಂಭ ನೋಡುವಾಗ ಪಂದ್ಯವನ್ನು ಗೆಲ್ಲಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಪಥುಮ್‌ ನಿಸ್ಸಂಕ-ಕುಸಲ್‌ ಮೆಂಡಿಸ್‌ 8.4 ಓವರ್‌ಗಳಿಂದ 84 ರನ್‌ ಪೇರಿಸಿ ಅಪಾಯಕಾರಿಯಾಗಿ ಗೋಚರಿಸಿದ್ದರು. ನಿಸ್ಸಂಕ 48 ಎಸೆತಗಳಿಂದ 79 (7 ಬೌಂಡರಿ, 4 ಸಿಕ್ಸರ್‌), ಮೆಂಡಿಸ್‌ 45 ರನ್‌ ಬಾರಿಸಿದರು. ರಿಯಾನ್​ ಪರಾಗ್‌ ಕೇವಲ 5 ರನ್‌ ವೆಚ್ಚದಲ್ಲಿ 3 ವಿಕೆಟ್‌ ಉರುಳಿಸಿದ್ದು ಪಂದ್ಯದ ಗತಿಯನ್ನೇ ಬದಲಿಸಿತು. ಭಾರತ ಗೆಲುವಿನ ನಗೆ ಬೀರಿತು. ದ್ವಿತೀಯ ಪಂದ್ಯ ಇಂದು ನಡೆಯಲಿದೆ.

Exit mobile version