Site icon Vistara News

IND VS SL | ಸೂರ್ಯಕುಮಾರ್​ ಬ್ಯಾಟಿಂಗ್​ ಪ್ರತಾಪ; ಲಂಕಾ ಗೆಲುವಿಗೆ 229 ರನ್​ ಗುರಿ

suryakumar yadav

ರಾಜ್​ಕೋಟ್​: ಸರಣಿ ಗೆಲುವಿನ ನಿರ್ಣಾಯಕ ಪಂದ್ಯದಲ್ಲಿ ಟೀಮ್​ ಇಂಡಿಯಾ(IND VS SL) 228 ರನ್​ ಗಳಿಸಿದೆ. ಪ್ರವಾಸಿ ಶ್ರೀಲಂಕಾ ಗೆಲುವಿಗೆ 229 ರನ್​ ಪೇರಿಸಬೇಕಿದೆ. ಸೂರ್ಯಕುಮಾರ್​(ಅಜೇಯ 112) ಶತಕ ಬಾರಿಸಿದ ಪರಿಣಾಮ ಭಾರತ ಬೃಹತ್​ ಮೊತ್ತ ಪೇರಿಸಿತು.

ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಈ ಮುಖಾಮುಖಿಯಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 228 ರನ್ ಗಳಿಸಿತು. ಭಾರತ ಪರ ಸೂರ್ಯಕುಮಾರ್​(ಅಜೇಯ 112 )ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಲಂಕಾ ಪರ ದಿಲ್ಶನ್​ ಮದುಶಂಕ 2 ವಿಕೆಟ್​ ಕಿತ್ತರು.

ಇಶಾನ್​ ಕಿಶನ್​ ವಿಫಲ

ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿ ಮಿಂಚಿದ್ದ ಇಶಾನ್​ ಕಿಶನ್​ ಲಂಕಾ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಆಡಿದ ಮೂರು ಪಂದ್ಯಗಳಲ್ಲಿಯೂ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಅಂತಿಮ ಪಂದ್ಯದಲ್ಲಿ 1 ರನ್​ ಗಳಿಸಲಷ್ಟೇ ಶಕ್ತರಾದರು.

ಕಳೆದ ಪಂದ್ಯದಲ್ಲಿ ಟೀಮ್​ ಇಂಡಿಯಾ ಪರ ಪದಾರ್ಪಣ ಪಂದ್ಯವನ್ನಾಡಿದ ರಾಹುಲ್​ ತ್ರಿಪಾಠಿ ಈ ಪಂದ್ಯದಲ್ಲಿ ಖಾತೆ ತೆರೆಯುವ ಮುನ್ನವೇ ಒಂದು ಜೀವದಾನ ಪಡೆದರು. ಈ ಲಾಭವನ್ನು ಉಪಯುತ್ತವಾಗಿ ಬಳಿಸಿಕೊಂಡ ಅವರು ಲಂಕಾ ಬೌಲರ್​ಗಳನ್ನು ಕಾಡಲಾರಂಭಿಸಿದರು. ಒಂದು ಹಂತದಲ್ಲಿ ಸಿಕ್ಸರ್​, ಬೌಂಡರಿಗಳ ಸುರಿಮಳೆಗೈದು ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ 35 ರನ್​ ಗಳಿಸಿದ ವೇಳೆ ಚಮಿಕ ಕರುಣರತ್ನೆ ಎಸೆತದಲ್ಲಿ ಕ್ಯಾಚ್​ ನೀಡಿ ಔಟಾದರು. ಅವರ ಸ್ಫೋಟಕ ಇನಿಂಗ್ಸ್​ ವೇಳೆ 5 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಯಿತು.

ಸೂರ್ಯ ಸ್ಫೋಟಕ ಬ್ಯಾಟಿಂಗ್​

ಹೊಡಿಬಡಿ ಆಟಗಾರ ಸೂರ್ಯಕುಮಾರ್​ ಯಾದವ್​ ಆರಂಭದಿಂದಲೇ ಲಂಕಾ ಬೌಲರ್​ಗಳ ಮೇಲೆರಗಿ ಸಿಕ್ಸರ್​, ಬೌಂಡರಿಗಳ ಸುರಿಮಳೆಗೈದರು. ನಟರಾಜ ಭಂಗಿಯಲ್ಲಿ ಬ್ಯಾಟ್​ ಬೀಸಿದ ಅವರು ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿ ನೆರೆದಿದ್ದ ಅಭಿಮಾನಿಗಳಿಗೆ ಭರಪೂರ ರಂಜನೆ ನೀಡಿದರು. ಇದೇ ವೇಳೆ ಟಿ20 ಕ್ರಿಕೆಟ್​ನಲ್ಲಿ ಮೂರನೇ ಶತಕ ಬಾರಿಸಿ ಮಿಂಚಿದರು. ಒಟ್ಟು 51 ಎಸೆತ ಎದುರಿಸಿದ ಅವರು 9ಸಿಕ್ಸರ್​ ಮತ್ತು7ಬೌಂಡರಿ ಬಾರಿಸಿ ಅಜೇಯ 112 ರನ್​ ಗಳಿಸಿದರು. ಅಂತಿಮವಾಗಿ ಬಿರುಸಿನ ಬ್ಯಾಟಿಂಗ್​ ನಡೆಸಿದ ಅಕ್ಷರ್​ ಪಟೇಲ್ ಕೇವಲ 9 ಎಸೆತಗಳಿಂದ ಅಜೇಯ21​ ರನ್​ ಚಚ್ಚಿದರು. ಉಳಿದಂತೆ ಶುಭಮನ್​ ಗಿಲ್​ 46 ರನ್​ ಬಾರಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರ್​

ಭಾರತ: 20 ಓವರ್​ಗಳಲ್ಲಿ 5 ವಿಕೆಟ್​ಗೆ 228: ಸೂರ್ಯಕುಮಾರ್​(ಅಜೇಯ 112) , ರಾಹುಲ್​ ತ್ರಿಪಾಠಿ(35), ಶುಭಮನ್​ ಗಿಲ್​(46).

​ಇದನ್ನೂ ಓದಿ | IND VS NZ | ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯಿಂದ ಕೊಹ್ಲಿ, ರೋಹಿತ್​ಗೆ ಕೊಕ್​?

Exit mobile version