ಮುಂಬಯಿ: ಶ್ರೀಲಂಕಾ(IND vs SL) ವಿರುದ್ಧ ಭಾರತ ತಂಡ ಬೃಹತ್ ಮೊತ್ತ ಪೇರಿಸುವ ಮೂಲಕ ವಿಶ್ವಕಪ್ನಲ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದೆ. ವೈಯಕ್ತಿಕ ಶತಕವಿಲ್ಲದೆ ಹೆಚ್ಚಿನ ಸ್ಕೋರ್ ಬಾರಿಸಿದ ಮೊದಲ ತಂಡ ಎಂಬ ದಾಖಲೆ ಬರೆದಿದೆ. ಈ ಮೂಲಕ ಬದ್ಧ ಎದುರಾಳಿ ಪಾಕಿಸ್ತಾನದ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದೆ.
ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಮೊದಲ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು. ಈ ಮೂಲಕ ಒಂದೇ ಒಂದು ಶತಕವಿಲ್ಲದೆ ವಿಶ್ವಕಪ್ನಲ್ಲಿ ಅತ್ಯಧಿಕ ಮೊತ್ತ ಪೇರಿಸಿದ ತಂಡ ಎಂಬ ದಾಖಲೆ ಬರೆಯಿತು. ಈ ವರೆಗೆ ಈ ದಾಖಲೆ ಪಾಕಿಸ್ತಾನ ತಂಡದ ಹೆಸರಿನಲ್ಲಿತ್ತು. 2019ರ ಲಂಡನ್ನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ 8 ವಿಕೆಟ್ಗೆ 348 ರನ್ ಬಾರಿಸಿತ್ತು. ಆದರೆ ಇದೀಗ ಭಾರತ 8 ವಿಕೆಟ್ಗೆ 357ರನ್ ಬಾರಿಸಿ ಪಾಕ್ ದಾಖಲೆಯನ್ನು ಹಿಂದಿಕ್ಕಿದೆ.
ಒಂದು ದಾಖಲೆ ಪಾಕ್ ಹೆಸರಿನಲ್ಲಿದೆ
ಅತಿ ಹೆಚ್ಚು ಬಾರಿ ವಿಶ್ವಕಪ್ನಲ್ಲಿ ಶತಕವಿಲ್ಲದೆ ಅತ್ಯಧಿಕ ಮೊತ್ತ ಪೇರಿಸಿದ ದಾಖಲೆ ಮಾತ್ರ ಇನ್ನೂ ಪಾಕಿಸ್ತಾನ ತಂಡದ ಹೆಸರಿನಲ್ಲಿದೆ. ಪಾಕ್ ಒಟ್ಟು ಮೂರು ಬಾರಿ ಈ ದಾಖಲೆ ನಿರ್ಮಿಸಿದೆ. 1983ರಲ್ಲಿ ಲಂಕಾ ವಿರುದ್ಧ 338, ಆ ಬಳಿಕ 2015ರಲ್ಲಿ ಯುಎಇ ವಿರುದ್ಧ 339 ಮತ್ತು 2019ರಲ್ಲಿ ಇಂಗ್ಲೆಂಡ್ ವಿರುದ್ಧ 348 ರನ್ ಗಳಿಸಿತ್ತು.
ಇದನ್ನೂ ಓದಿ Virat Kohli: ಕೊಹ್ಲಿಯ ಅರ್ಧಶತಕಕ್ಕೆ ಹಲವು ದಿಗ್ಗಜರ ವಿಶ್ವಕಪ್ ದಾಖಲೆ ಧೂಳೀಪಟ
ಮಿಂಚಿದ ಗಿಲ್-ಕೊಹ್ಲಿ
ಈ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ನಾಯಕ ರೋಹಿತ್ ಅವರು ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರೂ ಈ ಜೋಶ್ ಹೆಚ್ಚು ಕಾಲ ಉಳಿಯಲಿಲ್ಲ. ಮುಂದಿನ ಎಸೆತದಲ್ಲೇ ದಿಲ್ಶನ್ ಮಧುಶಂಕ ಅವರು ರೋಹಿತ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಆದರೆ ಆ ಬಳಿಕ ಬಂದ ವಿರಾಟ್ ಕೊಹ್ಲಿ ಅವರು ತಾಳ್ಮೆಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು. ಗಿಲ್ ಕೂಡ ಆರಂಭಿಕ ಹಂತದಲ್ಲಿ ನಿಧಾನಗತಿಯ ಬ್ಯಾಟಿಂಗ್ಗೆ ಒತ್ತು ನೀಡಿದರು. ಇದೇ ವೇಳೆ ಕೊಹ್ಲಿ ಮತ್ತು ಗಿಲ್ ತಲಾ ಒಂದು ಜೀವದಾನ ಪಡೆದರು. ಕೊಹ್ಲಿ 10 ರನ್ ಗಳಿಸಿದ ವೇಳೆ ಕ್ಯಾಚ್ನಿಂದ ಪಾರಾದರೆ, ಗಿಲ್ 8 ರನ್ ವೇಳೆ ಜೀವದಾನ ಪಡೆದರು. ಉಭಯ ಆಟಗಾರರು ಈ ಲಾಭವನ್ನೆತ್ತಿ ಅರ್ಧಶತಕ ಬಾರಿಸಿ ಮಿಂಚಿದರು.
ಶತಕ ಬಾರಿಸಲು ಜಿದ್ದಿಗೆ ಬಿದ್ದು ತಾ ಮುಂದು, ನಾ ಮುಂದು ಎಂದು ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಶುಭಮನ್ ಗಿಲ್ ಅವರು 92 ರನ್ ಗಳಿಸಿ ಸುಲಭ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು. ಕೇವಲ 8 ರನ್ಗಳ ಅಂತರದಿಂದ ಶತಕ ವಂಚಿತರಾದರು. ಗಿಲ್ ವಿಕೆಟ್ ಪತನಗೊಂಡ 3 ರನ್ ಅಂತರದಲ್ಲಿ ವಿರಾಟ್ ಕೊಹ್ಲಿ ಕೂಡ ವಿಕೆಟ್ ಕೈಚೆಲ್ಲಿದರು. ಉಭಯ ಆಟಗಾರರ ವಿಕೆಟ್ ಕೂಡ ದಿಲ್ಶನ್ ಮಧುಶಂಕ ಪಾಲಾಯಿತು. ಅಲ್ಲಿಗೆ ಆರಂಭಿಕ ಮೂರು ವಿಕೆಟ್ ಕೂಡ ಮಧುಶಂಕ ಖಾತೆಗೆ ಸೇರಿತು. ಕೊಹ್ಲಿ 88 ರನ್ಗೆ ಆಟ ಮುಗಿಸಿದರು.