ಕೋಲ್ಕೊತಾ: ಪ್ರವಾಸಿ ಶ್ರೀಲಂಕಾ(IND VS SL) ವಿರುದ್ಧ ಈಗಾಗಲೇ ಮೊದಲ ಏಕದಿನ ಪಂದ್ಯವನ್ನು ಗೆದ್ದಿರುವ ಟೀಮ್ ಇಂಡಿಯಾ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಉಭಯ ತಂಡಗಳ ಕಾದಾಟ ಗುರುವಾರ ಕೋಲ್ಕೊತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ.
ಮೊದಲ ಪಂದ್ಯವನ್ನು ಸೋತಿರುವ ಶ್ರೀಲಂಕಾಗೆ ಸರಣಿ ಜೀವಂತವಿರಿಸಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಅತ್ತ ಭಾರತ ಈ ಪಂದ್ಯದಲ್ಲಿಯೂ ಮೇಲುಗೈ ಸಾಧಿಸಿ ಸರಣಿ ವಶ ಪಡಿಸುವ ಯೋಜನೆಯಲ್ಲಿದ್ದೆ. ಒಟ್ಟಾರೆ ಇತ್ತಂಡಗಳ ಈ ಹೋರಾಡ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಇದೆ.
ಭಾರತಕ್ಕೆ ಬ್ಯಾಟಿಂಗ್ ಬಲ
ಕಳೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಯುವ ಆಟಗಾರ ಶುಭಮನ್ ಗಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆದ್ದರಿಂದ ಈ ಪಂದ್ಯದಲ್ಲಿಯೂ ಇವರ ಮೇಲೆ ತಂಡ ಹೆಚ್ಚು ಅವಲಂಬಿತವಾಗಿದೆ. ಇನ್ನೊಂದೆಡೆ ಭಾರತದ ಬೌಲಿಂಗ್ ವಿಭಾಗ ಸುಧಾರಣೆ ಕಾಣಬೇಕಿದೆ. ಮೊದಲ ಪಂದ್ಯದಲ್ಲಿ 300ರ ಗಡಿ ದಾಟಿದರೂ ದೊಡ್ಡ ಮೊತ್ತದ ಗೆಲುವು ಸಾಧಿಸುವಲ್ಲಿ ವಿಫಲವಾಯಿತು. ಆದ್ದರಿಂದ ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್ ತಮ್ಮ ಎಸೆತಗಳಿಗೆ ಮತ್ತಷ್ಟು ಸಾಣೆ ಹಿಡಿಯಬೇಕಿದೆ. ಉಳಿದಂತೆ ಸ್ಪಿನ್ನರ್ಗಳಾದ ಅಕ್ಷರ್ ಪಟೇಲ್ ಮತ್ತು ಯಜುವೇಂದ್ರ ಚಹಲ್ ಚೆಂಡನ್ನು ಬುಗುರಿಯಂತೆ ತಿರುಗಿಸಿ ಎದುರಾಳಿ ಬ್ಯಾಟರ್ಗಳನ್ನು ಕಟ್ಟಿಹಾಕಬೇಕಿದೆ.
ಲಂಕಾಗೆ ನಾಯಕ ಶನಕ ಬಲ
ಟಿ20 ಸರಣಿಯಲ್ಲೂ ಲಂಕಾ ತಂಡಕ್ಕೆ ಆಸರೆಯಾದದ್ದು ಕೂಲ್ ಕ್ಯಾಪ್ಟನ್ ಖ್ಯಾತಿಯ ದಸುನ್ ಶನಕ. ಕಳೆದ ಏಕದಿನ ಪಂದ್ಯದಲ್ಲಿಯೂ ಅವರು ಏಕಾಂಗಿಯಾಗಿ ಹೋರಾಡಿ ಸೋಲಿನ ಅಂತರವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಲಂಕಾ ತಂಡ ನಾಯಕನ ಆಟದ ಮೇಲೆ ಹೆಚ್ಚು ಅವಂಬಿತವಾಗಿದೆ. ಇನ್ನಾದರೂ ಲಂಕಾ ಆಟಗಾರರು ಈ ಪಂದ್ಯದಲ್ಲಿ ಶ್ರೇಷ್ಠ ಬ್ಯಾಟಿಂಗ್ ನಡೆಸುವ ಮೂಲಕ ಶನಕ ಅವರಿಗೆ ಉತ್ತಮ ಸಾಥ್ ನೀಡಬೇಕಿದೆ. ಆ ಮೂಲಕ ಗೆಲುವು ಸಾಧಿಸಿ ಸರಣಿಯನ್ನು ಸಮಬಲ ಮಾಡಬೇಕಿದೆ.
ಉಭಯ ತಂಡಗಳಲ್ಲಿಯೂ ಆಟಗಾರರ ಬದಲಾವಣೆ ಸಂಭವಿಸುವುದು ಅನುಮಾನ. ಆದ್ದರಿಂದ ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ತಂಡವನ್ನೇ ಈ ಪಂದ್ಯದಲ್ಲಿಯೂ ಮುಂದುವರಿಸುವ ಸಾಧ್ಯತೆ ಹೆಚ್ಚು ಎನ್ನಲಡ್ಡಿಯಿಲ್ಲ. ಒಟ್ಟಾರೆ ಲಂಕಾ ಪಾಲಿಗೆ ಈ ಪಂದ್ಯ ಮಾಡು ಇಲ್ಲ ಮಡಿ ಪಂದ್ಯವಾಗಿದೆ.
ಇದನ್ನೂ ಓದಿ | IND VS SL | ಭಾರತ-ಶ್ರೀಲಂಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದ ಪಿಚ್ ರಿಪೋರ್ಟ್