Site icon Vistara News

IND VS SL | ಟೀಮ್​ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಆರಂಭ; ಲಂಕಾ ಸರಣಿಯಿಂದ ಹಿರಿಯ ಆಟಗಾರರಿಗೆ ಕೊಕ್​!

rahul,virat,rohit

ನವದೆಹಲಿ: ಶ್ರೀಲಂಕಾ ವಿರುದ್ಧದ ಏಕ ದಿನ ಮತ್ತು ಟಿ20 ಸರಣಿಗೆ(IND VS SL) ಬಿಸಿಸಿಐ ಮಂಗಳವಾರ ಟೀಮ್​ ಇಂಡಿಯಾವನ್ನು ಪ್ರಕಟಿಸಿದೆ. ಚುಟುಕು ಮಾದರಿಯ ಕ್ರಿಕೆಟ್​ನಿಂದ ಎಲ್ಲ ಹಿರಿಯ ಆಟಗಾರರನ್ನು ಕೈಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಆದರೆ ಕನ್ನಡಿಗ ಕೆ.ಎಲ್​. ರಾಹುಲ್​ ಏಕದಿನ ತಂಡದಲ್ಲಿ ಸ್ಥಾನ ಪಡೆದರೂ ಉಪನಾಯಕತ್ವ ಪಟ್ಟವನ್ನು ಕಳೆದುಕೊಂಡಿದ್ದಾರೆ.

ಇತ್ತೀಚೆಗೆಷ್ಟೇ ಮುಕ್ತಾಯ ಕಂಡ ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕ ದಿನ ಮತ್ತು ಟೆಸ್ಟ್​ ಸರಣಿಯಲ್ಲಿ ನಾಯಕತ್ವ ವಹಿಸಿ ತಂಡಕ್ಕೆ ಗೆಲುವು ತಂದು ಕೊಟ್ಟ ಕೆ.ಎಲ್​. ರಾಹುಲ್​ ಅಚ್ಚರಿ ಎಂಬಂತೆ ಉಪನಾಯಕತ್ವ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಈ ಪಟ್ಟ ಇದೀಗ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಪಾಲಾಗಿದೆ.

ಹಾರ್ದಿಕ್​ ಪಾಂಡ್ಯ ಯುಗ ಆರಂಭ!

ಟಿ20 ವಿಶ್ವ ಕಪ್​ ಸೋಲಿನ ಬಳಿಕ ಬಿಸಿಸಿಐ ಕೆಲ ಮಹತ್ವದ ನಿರ್ಧಾರವನ್ನು ಕೈಗೊಂಡಿತ್ತು. ಅದರಂತೆ 2024ರ ಟಿ20 ವಿಶ್ವ ಕಪ್​ಗೆ ಯುವ ಪಡೆಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ 30 ಪ್ಲಸ್​ ಲೀಸ್ಟ್​ನಲ್ಲಿರುವ ಎಲ್ಲ ಆಟಗಾರರನ್ನು ತಂಡದಿಂದ ಹೊರಗಿಡಲಾಗುವುದು ಎಂದು ಹೇಳಿತ್ತು. ಇದೀಗ ನಿರೀಕ್ಷೆಯಂತೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ
ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌ ಸೇರಿ ಹಿರಿಯ ಆಟಗಾರರನ್ನು ಕೈಬಿಡಲಾಗಿದೆ. ಜತೆಗೆ ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ನೀಡಲಾಗಿದೆ. ಆದ್ದರಿಂದ ಈ ಸರಣಿಯಿಂದ ಹೊರ ಬಿದ್ದ ಆಟಗಾರರು ಇನ್ನು ಟಿ20 ಸರಣಿಯಲ್ಲಿ ಅವಕಾಶ ಪಡೆಯುವುದು ಅನುಮಾನ ಎನ್ನಲಾಗಿದೆ. ಉಳಿದಂತೆ ಈ ಸರಣಿಯಿಂದಲೇ ಪಾಂಡ್ಯ ನಾಯಕತ್ವದ ಯುಗ ಆರಂಭವಾದರೂ ಅಚ್ಚರಿಯಿಲ್ಲ.

ತಂಡದಿಂದ ಹೊರ ಬೀಳುವರೇ ಕೆ.ಎಲ್​. ರಾಹುಲ್

ಎಲ್ಲಕ್ಕಿಂತ ಮುಖ್ಯವಾದ ಸಂಗತಿ ಎಂದರೆ. ಮೂರು ಮಾದರಿಯ ತಂಡಗಳಿಗೆ ಉಪನಾಯಕನಾಗಿದ್ದ ರಾಹುಲ್‌, ರೋಹಿತ್​ ಬಳಿಕ ಟೀಮ್​ ಇಂಡಿಯಾದ ಭವಿಷ್ಯದ ನಾಯಕ ಎಂದು ಬಿಂಬಿಸಲ್ಪಟ್ಟಿದ್ದರು. ಆದರೆ ರಾಹುಲ್​ ಅವರ ಕಳಪೆ ಬ್ಯಾಟಿಂಗ್​ ಫಾರ್ಮ್​ ಇದೀಗ ಅವರಿಗೆ ಮುಳುವಾಗಿದೆ. ಟಿ20ಗೆ ಹಾರ್ದಿಕ್‌ ಅವರೇ ಮುಂದಿನ ನಾಯಕ ಎನ್ನುವುದು ಖಚಿತವಾಗಿದೆ. ಇಲ್ಲಿ ರಾಹುಲ್‌ ಅವರು ಸ್ಥಾನ ಉಳಿಸಿಕೊಳ್ಳುವುದೇ ಕಷ್ಟ ಎನಿಸಿಕೊಂಡಿದೆ. ಇನ್ನು ಶ್ರೀಲಂಕಾ ಪ್ರವಾಸದಲ್ಲೇ ರಾಹುಲ್‌ ಏಕ ದಿನ ತಂಡದ ಉಪನಾಯಕ ಪಟ್ಟವನ್ನು ಕಳೆದುಕೊಂಡಿದ್ದಾರೆ. ಹಾರ್ದಿಕ್‌ ಆ ಸ್ಥಾನ ಪಡೆದಿದ್ದಾರೆ. ಅಲ್ಲಿಗೆ ಏಕ ದಿನ, ಟಿ20ಗೆ ಹಾರ್ದಿಕ್‌ ಮುಂದಿನ ನಾಯಕ ಎಂಬ ಸುಳಿವನ್ನು ಬಿಸಿಸಿಐ ನೀಡಿದೆ. ಒಟ್ಟಾರೆ ಬಿಸಿಸಿಐ ಈ ಬಾರಿ ಸ್ಟಾರ್​ ಆಟಗಾರನಾಗಿದ್ದರೂ ಫಾರ್ಮ್​ ಕಳೆದುಕೊಂಡವರನ್ನು ಕೈ ಬಿಟ್ಟು ಯುವ ಆಟಗಾರರಿಗೆ ಮಣೆ ಹಾಕಿದ್ದನ್ನು ಗಮನಿಸುವಾಗ ಮೇಜರ್​ ಸರ್ಜರಿಗೆ ಮುಂದಾದಂತೆ ಕಾಣುತ್ತಿದೆ.

ರಾಹುಲ್​ಗೆ ಕಡೇಯ ಅವಕಾಶ
ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ರಾಹುಲ್​ಗೆ ಲಂಕಾ ವಿರುದ್ಧದ ಏಕದಿನದಲ್ಲಿ ಕೀಪಿಂಗ್​ ಹೊಣೆಯನ್ನು ನೀಡಲಾಗಿದೆ. ಒಂದೊಮ್ಮೆ ರಾಹುಲ್​ ಬ್ಯಾಟಿಂಗ್​ ಜತೆಗೆ ಕೀಪಿಂಗ್​ನಲ್ಲಿಯೂ ಮತ್ತೆ ವೈಫಲ್ಯ ಕಂಡರೆ ತಂಡದಿಂದ ಹೊರ ಬೀಳಿವುದು ಖಚಿತ ಎನ್ನಲಡ್ಡಿಯಿಲ್ಲ. ಆದ್ದರಿಂದ ರಾಹುಲ್​ ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ಜತೆಗೆ ಸದಾ ಅಸ್ಥಿರ ಪ್ರದರ್ಶನ ನೀಡುವ ರಿಷಭ್‌ ಪಂತ್‌ ಕೂಡ ಜಾಗ ಕಳೆದುಕೊಂಡಿದ್ದಾರೆ. ಇದು ರಿಷಭ್‌ ಭವಿಷ್ಯದ ಪ್ರಶ್ನೆಯೂ ಹೌದು. ಹಿಂದಿನಂತೆ ಕೇವಲ ಕೆಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದರೆ ತಂಡದಲ್ಲಿ ಖಾಯಂ ಸ್ಥಾನ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ ಕೆಲ ಆಟಗಾರರಿಗೆ ಲಂಕಾ ಸರಣಿಯ ಕೆಲ ನಿರ್ಧಾರದಿಂದ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ನಡುಕ ಉಂಟಾಗಿದೆ.

ಇದನ್ನೂ ಓದಿ | INDvsSL | ಲಂಕಾ ಸರಣಿಗೆ ಭಾರತ ತಂಡ ಪ್ರಕಟ, ಒಡಿಐನಲ್ಲಿ ರಾಹುಲ್​ಗೆ ಚಾನ್ಸ್​, ರೋಹಿತ್​ ವಾಪಸ್​

Exit mobile version