ತಿರುವನಂತಪುರ: ಭಾರತ (IND VS SL ) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಪ್ರವಾಸಿ ಶ್ರೀಲಂಕಾ ಅಂತಿಮ ಪಂದ್ಯವನ್ನಾಡಲು ಸಜ್ಜಾಗಿದೆ. ಈಗಾಗಲೇ ಸರಣಿಯನ್ನು ಕಳೆದುಕೊಂಡಿರುವ ದಸುನ್ ಶನಕ ಪಡೆ ಈ ಪಂದ್ಯದಲ್ಲಿ ಗೆದ್ದು ವೈಟ್ವಾಶ್ ಅವಮಾನದಿಂದ ಹೊರಬರಲು ತೀವ್ರ ಹೋರಾಟ ನಡೆಸುವ ಯೋಜನೆ ರೂಪಿಸಿದೆ. ಉಭಯ ತಂಡಗಳ ಈ ಮುಖಾಮುಖಿ ಭಾನುವಾರ ತಿರುವನಂತಪುರದಲ್ಲಿ ನಡೆಯಲಿದೆ.
ಸರಣಿಯಲ್ಲಿ ಈಗಾಗಲೇ ಮೇಲುಗೈ ಸಾಧಿಸಿರುವ ಭಾರತ ತಂಡ ಈ ಪಂದ್ಯದಲ್ಲಿಯೂ ಗೆದ್ದು ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ಭರ್ಜರಿ ಸಿದ್ಧತೆ ನಡೆಸುವ ಯೋಜನೆಯಲ್ಲಿದೆ. ಇನ್ನೊಂದೆಡೆ ಭಾರತ ಈ ಪಂದ್ಯದಲ್ಲಿ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯೂ ದಟ್ಟವಾಗಿದೆ.
ಕಿವೀಸ್ ವಿರುದ್ಧದ ಸರಣಿಯನ್ನು ಗಮನದಲ್ಲಿಟ್ಟುಕೊಂಡು ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಇವರ ಬದಲಿಗೆ ಇಶಾನ್ ಕಿಶನ್, ಅರ್ಶ್ದೀಪ್ ಸಿಂಗ್ ಅಥವಾ ಸೂರ್ಯಕುಮಾರ್ ಯಾದವ್ಗೆ ಆಡುವ ಅವಕಾಶ ಸಿಗಬಹುದು. ಇದರ ಜತೆಗೆ ಈ ಸರಣಿಯಲ್ಲಿ ಆಡುವ ಅವಕಾಶ ಸಿಗದೇ ಇರುವ ಆಟಗಾರರಿಗೆ ಈ ಪಂದ್ಯದಲ್ಲಿ ಅವಕಾಶ ನೀಡಿದರೂ ಅಚ್ಚರಿಯಿಲ್ಲ.
ಯಜುವೇಂದ್ರ ಚಹಲ್ ಬದಲಿಗೆ ಕಳೆದ ಪಂದ್ಯದಲ್ಲಿ ಅವಕಾಶ ಪಡೆದು ಮಿಂಚಿದ ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲ್ದೀಪ್ ಯಾದವ್ ಮೇಲೆ ಈ ಪಂದ್ಯದಲ್ಲಿಯೂ ನಿರೀಕ್ಷೆ ಇರಿಸಲಾಗಿದೆ. ಈಡನ್ ಗಾರ್ಡನ್ಸ್ನಂತೆಯೇ ಗ್ರೀನ್ ಪಾರ್ಕ್ ಪಿಚ್ನಲ್ಲಿಯೂ ತಮ್ಮ ಸ್ಪಿನ್ ಮೋಡಿ ಮೂಡಿಬಂದಿತೇ ಎಂಬುದನ್ನು ಕಾದು ನೋಡಬೇಕಿದೆ.
ಲಂಕಾ ತಂಡದಲ್ಲಿ ಬದಲಾವಣೆ ಸಂಭವಿಸುವುದು ಅನುಮಾನ. ಏಕೆಂದರೆ ಲಂಕಾ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಅವಮಾನದಿಂದ ಪಾರಾಗುವ ಪಣ ತೊಟ್ಟಿದೆ. ಆದ್ದರಿಂದ ಲಂಕಾ ಆಟಗಾರರು ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಆಡಲಿಳಿಸಬಹುದು.
ಇದನ್ನೂ ಓದಿ | IND VS SL | ಭಾರತ-ಶ್ರೀಲಂಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡದ ಮಾಹಿತಿ