ಕೊಲಂಬೊ: ಪಾಕಿಸ್ತಾನ ವಿರುದ್ಧ ಸೋಮವಾರ ಬೃಹತ್ ಮೊತ್ತದ ಅಂತರದಿಂದ ಗೆದ್ದು ಬೀಗಿದ ಭಾರತ ತಂಡ, ಮರು ದಿನವೇ ಹಾಲಿ ಚಾಂಪಿಯನ್ ಶ್ರೀಲಂಕಾ(IND vs SL) ವಿರುದ್ಧ ಮತ್ತೊಂದು ಪಂದ್ಯವನ್ನಾಡಲು ಸಿದ್ಧವಾಗಿದೆ. ಉಭಯ ತಂಡಗಳ ಈ ಹೋರಾಟದಲ್ಲಿ ಯಾರೇ ಗೆದ್ದರು ಫೈನಲ್ಗೆ ನೇರ ಪ್ರವೇಶ ಪಡೆಯಲಿದ್ದಾರೆ. ಹೀಗಾಗಿ ಈ ಪಂದ್ಯ ರೋಚಕವಾಗಿ ಸಾಗುವ ನಿರೀಕ್ಷೆ ಇದೆ. ಆದರೆ ಈ ಪಂದ್ಯಕ್ಕೂ ಮಳೆಯ ಭೀತಿ ಕಾಡಿದೆ.
ರಾಹುಲ್-ಕೊಹ್ಲಿ ಮೇಲೆ ಮತ್ತೊಂದು ನಿರೀಕ್ಷೆ
ಗಾಯದಿಂದ ಚೇತರಿಕೆ ಕಂಡು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಭರ್ಜರಿ ಶತಕ ಬಾರಿಸಿ ಗ್ರೇಟ್ ಕಮ್ಬ್ಯಾಕ್ ಮಾಡಿದ್ದಾರೆ. ರಾಹುಲ್ ಅವರ ಈ ಕಮ್ಬ್ಯಾಕ್ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತಕ್ಕೆ ಹೆಚ್ಚಿನ ಆತ್ಮವಿಶ್ವಾಸ ಮೂಡುವಂತೆ ಮಾಡಿದೆ. ಅವರು ಗಾಯದಿಂದ ಚೇತರಿಕೆ ಕಂಡ ತಕ್ಷಣ ಏಷ್ಯಾಕಪ್ಗೆ ಆಯ್ಕೆ ಮಾಡಿದ ವಿಚಾರದಲ್ಲಿ ಸುನೀಲ್ ಗವಾಸ್ಕರ್, ರವಿಶಾಸ್ತ್ರಿ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಪಾಕ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಬ್ಯಾಟ್ ಮೂಲಕವೇ ಉತ್ತರಿಸಿದ್ದರು. ಇದೀಗ ಲಂಕಾ ವಿರುದ್ಧದ ಪಂದ್ಯದಲ್ಲೂ ಅವರ ಮೇಲೆ ತಂಡ ನಿರೀಕ್ಷೆಯೊಂದನ್ನು ಮಾಡಿದೆ. ಜತೆಗೆ ಪ್ರಚಂಡ ಫಾರ್ಮ್ನಲ್ಲಿರುವ ಕೊಹ್ಲಿಯ ಮೇಲು ತಂಡ ವಿಶ್ವಾಸ ಇಟ್ಟಿದೆ.
ವಿಶ್ವಕಪ್ಗೆ ಮೊದಲ ಕೀಪರ್ ಆಗಿ ಆಯ್ಕೆಗೊಂಡ ರಾಹುಲ್ ಅವರೇ ಈ ಪಂದ್ಯದಲ್ಲಿಯೂ ಕೀಪಿಂಗ್ ನಡೆಸಲಿದ್ದಾರೆ. ಇಶಾನ್ ಕಿಶನ್ ಕೇವಲ ಬ್ಯಾಟಿಂಗ್ ರೋಲ್ ಮಾತ್ರ ನಿರ್ವಹಿಸಲಿದ್ದಾರೆ. ಓಪನಿಂಗ್ ವಿಭಾಗದಲ್ಲಿ ಎಡವುತ್ತಿದ್ದ ನಾಯಕ ರೋಹಿತ್ ಉತ್ತಮ ಫಾರ್ಮ್ ಕಂಡುಕೊಂಡಿದ್ದಾರೆ. ಗಿಲ್ ಜತೆ ಸೇರಿಕೊಂಡು ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಹೀಗಾಗಿ ಬ್ಯಾಟಿಂಗ್ ಬಲಿಷ್ಠವಾಗಿ ಗೋಚರಿಸಿದೆ.
ಒಂದು ಬದಲಾವಣೆ ಸಾಧ್ಯತೆ
ಬೌಲಿಂಗ್ನಲ್ಲಿ ಚೈನಾಮನ್ ಖ್ಯಾತಿಯ ಕುಲ್ದೀಪ್ ಯಾದವ್ ಮತ್ತೊಮ್ಮೆ ಮೋಡಿ ಮಾಡುವ ವಿಶ್ವಾಸದಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪ್ರಮುಖ 5 ವಿಕೆಟ್ ಉರುಳಿಸಿ ಮೆರೆದಾಡಿದ್ದರು. ಜತೆಗೆ ಪಾಂಡ್ಯ ಇನ್ಸ್ವಿಂಗ್ ಮೂಲಕ ಗಮನಸೆಳೆದಿದ್ದರು. ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದ ಶಾರ್ದೂಲ್ ಅವರನ್ನು ಈ ಪಂದ್ಯದಲ್ಲಿ ಕೈಬಿಟ್ಟು ಅನುಭವಿ ಮೊಹಮ್ಮದ್ ಶಮಿ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ IND vs SL: ಭಾರತ-ಲಂಕಾ ಪಂದ್ಯಕ್ಕೂ ಮಳೆ ಭೀತಿ; ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಹೀಗಿದೆ
ಲಂಕಾ ಸವಾಲು ಸುಲಭವಲ್ಲ
ಶ್ರೀಲಂಕಾ ತಂಡದಲ್ಲಿ ಹೆಚ್ಚಿನ ಸ್ಟಾರ್ ಆಟಗಾರರು ಕಾಣಿಸಿಕೊಳ್ಳದಿದ್ದರೂ ಅವರ ಸವಾಲನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಏಕೆಂದರೆ ಯುವ ಆಟಗಾರರನ್ನೆ ನೆಚ್ಚಿಕೊಂಡ ಲಂಕಾ ಕಳೆದ ಬಾರಿ ಅಂಡರ್ ಡಾಗ್ ಎಂದೇ ಪರಿಗಣಿಸಿದ್ದರೂ ಕಪ್ ಎತ್ತಿ ಮೆರೆದಾಡಿತ್ತು. ಅಲ್ಲದೆ ಈ ಬಾರಿ ತವರಿನ ಲಾಭವೂ ತಂಡಕ್ಕಿದೆ. ಹೀಗಾಗಿ ಎಚ್ಚರಿಕೆಯಿಂದ ಭಾರತ ತಂಡ ಆಡಬೇಕಿದೆ. ಕಡೆಗಣಿಸಿದರೆ ಕೈ ಸುಟ್ಟುಕೊಳ್ಳುವುದು ಖಚಿತ. ಲಂಕಾ ಎಲ್ಲ ವಿಭಾಗದಲ್ಲಿಯೂ ಸಮತೋಲನವಾಗಿದೆ.
ಮೀಸಲು ದಿನ ಇಲ್ಲ
ಈ ಪಂದ್ಯಕ್ಕೆ ಮಳೆ ಬಂದರೆ ಮೀಸಲು ದಿನ ಇಲ್ಲ. ಹೀಗಾಗಿ ಪಂದ್ಯ ಮಳೆಯಿಂದ ನಡೆಯದೇ ಹೋದರೆ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುತ್ತದೆ. ಸದ್ಯ ಅಂಕಪಟ್ಟಿಯಲ್ಲಿ ಇತ್ತಂಡಗಳು 2 ಅಂಕ ಸಂಪಾದಿಸಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿ ಕಾಣಿಸಿಕೊಂಡಿದೆ.