ಮುಂಬಯಿ: ಪ್ರವಾಸಿ ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ ಮೊದಲ ಟಿ20(IND VS SL) ಪಂದ್ಯದಲ್ಲಿ ಟೀಮ್ ಇಂಡಿಯಾ 2 ರನ್ಗಳ ರೋಚಕ ಗೆಲುವು ಸಾಧಿಸಿ, ಹೊಸ ವರ್ಷವನ್ನು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಜತೆಗೆ ಈ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಅತಿ ವೇಗದ ಎಸೆತವೊಂದನ್ನು ಎಸೆದು ಜಸ್ಪ್ರೀತ್ ಬುಮ್ರಾ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತನ್ನ ಪಾಲಿನ ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ 2 ರನ್ ಅಂತರದ ಸೋಲು ಕಂಡಿತು.
155 ಕಿ.ಮೀ ವೇಗದಲ್ಲಿ ಬೌಲಿಂಗ್ ನಡೆಸಿದ ಉಮ್ರಾನ್
ಲಂಕಾ ಪರ ತಂಡದ ನಾಯಕ ದಸುನ್ ಶನಕ ಗೆಲುವಿಗಾಗಿ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದರು. ಇದೇ ವೇಳೆ 17ನೇ ಓವರ್ ಎಸೆಯಲು ಬಂದ ಉಮ್ರಾನ್ ಮಲಿಕ್ ಈ ಓವರ್ನ ನಾಲ್ಕನೇ ಎಸೆತವನ್ನು 155 ಕಿ.ಮೀ ವೇಗದಲ್ಲಿ ಎಸೆದು ಶನಕ ಅವರನ್ನು ಔಟ್ ಮಾಡಿದರು. ಈ ವೇಗದ ಎಸೆತವನ್ನು ಕವರ್ ಮೇಲೆ ಆಡಿದ ಶನಕ, ಯುಜುವೇಂದ್ರ ಚಹಲ್‌ಗೆ ಸುಲಭ ಕ್ಯಾಚ್ ನೀಡಿ ತಮ್ಮ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು.
ಬುಮ್ರಾ ದಾಖಲೆ ಮುರಿದ ಮಲಿಕ್
ಐಪಿಎಲ್ನಲ್ಲಿ ತಮ್ಮ ವೇಗದ ಎಸೆತದಿಂದ ಗುರುತಿಸಿಕೊಂಡಿದ್ದ ಕಾಶ್ಮೀರದ ವೇಗಿ ಉಮ್ರಾನ್, ಮಂಗಳವಾರದ ಪಂದ್ಯದಲ್ಲೂ ತನ್ನ ವೇಗದ ಬೌಲಿಂಗ್ ಮೂಲಕ ಬುಮ್ರಾ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ. ಜಸ್ಪ್ರೀತ್ ಬುಮ್ರಾ, 153.36 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದು ಇದುವರೆಗಿನ ಭಾರತೀಯ ಬೌಲರ್ ಒಬ್ಬನ ದಾಖಲೆಯಾಗಿತ್ತು. ಆದರೆ ಉಮ್ರಾನ್ ಮಲಿಕ್ ಈಗ 155 ಕಿ. ಮೀ ವೇಗದಲ್ಲಿ ಚೆಂಡನ್ನು ಎಸೆದು ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಮಲಿಕ್ ಹಾಗೂ ಬುಮ್ರಾರನ್ನು ಹೊರತುಪಡಿಸಿದರೆ, ಮೊಹಮ್ಮದ್ ಶಮಿ 153.3 ಕಿ.ಮೀ , ನವದೀಪ್ ಸೈನಿ 152.85 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ನಂತರದ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ | IndvsSL | ಲಂಕಾ ವಿರುದ್ಧ ಆಡಿದ ಶಿವಂ ಮಾವಿಗೆ ಯಾಕೆ 100ನೇ ಸಂಖ್ಯೆಯ ಕ್ಯಾಪ್, ಗಿಲ್ಗೆ ಯಾಕೆ 101?