ಮುಂಬಯಿ: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡ ಸಂಜು ಸ್ಯಾಮ್ಸನ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಇವರ ಸ್ಥಾನಕ್ಕೆ ಜಿತೇಶ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಟೀಮ್ ಇಂಡಿಯಾ(IND VS SL) ಸೇರಿದ ಜಿತೇಶ್ ಶರ್ಮಾ ಯಾರು, ಅವರ ಕ್ರಿಕೆಟ್ ಸಾಧನೆ ಏನೆಂಬುವುದು ಈ ಕೆಳಗೆ ವಿವರಿಸಲಾಗಿದೆ.
29 ವರ್ಷದ ಜಿತೇಶ್ ಶರ್ಮಾ ದೇಶೀಯ ಕ್ರಿಕೆಟ್‌ನಲ್ಲಿ, ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ವಿಕೆಟ್‌ಕೀಪರ್ ಆಗಿರುವ ಅವರು ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾರೆ. ಕಳೆದ ಮೆಗಾ ಹರಾಜಿನಲ್ಲಿ ಕೇವಲ 20 ಲಕ್ಷಕ್ಕೆ ಪಂಜಾಬ್ ಸೇರಿದ್ದ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಪಂಜಾಬ್ ತಂಡಕ್ಕೂ ಮುನ್ನ ಅವರನ್ನು ಮುಂಬೈ ಇಂಡಿಯನ್ಸ್ 2016ರಲ್ಲಿ 10 ಲಕ್ಷ ರೂ. ನೀಡಿ ಖರೀದಿಸಿತ್ತು. ಆದರೆ ಅವರಿಗೆ ಆಡುವ ಅವಕಾಶ ನೀಡಿರಲ್ಲಿಲ್ಲ.
ಕಳೆದ ಐಪಿಎಲ್ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಪಾದಾರ್ಪಣೆ ಮಾಡಿದ ಜಿತೇಶ್, ಆರಂಭಿಕ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿದ್ದರು.ಇಡೀ ಆವೃತ್ತಿಯಲ್ಲಿ 12 ಪಂದ್ಯಗಳನ್ನಾಡಿದ್ದ ಅವರು 163ರ ಸ್ಟ್ರೈಕ್ ರೇಟ್ನಲ್ಲಿ 234 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ದೇಶೀಯ ಟಿ20 ಕ್ರಿಕೆಟ್ನಲ್ಲಿಯೂ ಅವರು ಉತ್ತಮ ಸಾಧನೆ ತೋರಿದ್ದಾರೆ. ಒಟ್ಟು71 ಟಿ20 ಪಂದ್ಯಗಳನ್ನಾಡಿ 1,787 ರನ್ ಗಳಿಸಿದ್ದಾರೆ. ಜತೆಗೆ 54 ಕ್ಯಾಚ್ ಮತ್ತು 12 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.
ಸಂಜು ಸ್ಯಾಮ್ಯನ್ ಬದಲು ತಂಡಕ್ಕೆ ಆಯ್ಕೆಯಾದರೂ ಆಡುವ ಬಳಗದಲ್ಲಿ ಜಿತೇಶ್ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಏಕೆಂದರೆ ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡುವ ತ್ರಿಪಾಠಿ ಕಳೆದ ಕೆಲವು ಸರಣಿಯಲ್ಲಿ ತಂಡದೊಂದಿಗೆ ಪ್ರಯಾಣಿಸಿದ್ದರೂ ಕೂಡಾ ಇನ್ನೂ ಟಿ20 ಪಂದ್ಯವಾಡುವ ಅವಕಾಶ ಪಡೆದಿಲ್ಲ. ಆದ್ದರಿಂದ ಪುಣೆ ಪಂದ್ಯದಲ್ಲಿ ತ್ರಿಪಾಠಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ | IND VS SL | ಗಾಯಗೊಂಡು ಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದ ಸಂಜು ಸ್ಯಾಮ್ಸನ್!