ಕೊಲಂಬೊ: ಶುಕ್ರವಾರ ನಡೆದಿದ್ದ ಭಾರತ ಮತ್ತು ಶ್ರೀಲಂಕಾ(IND vs SL) ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಟೈನಲ್ಲಿ ಅಂತ್ಯ ಕಂಡಿತ್ತು. ಪಂದ್ಯ ಟೈಗೊಂಡರೂ ಕೂಡ ಫಲಿತಾಂಶ ನಿರ್ಧರಿಸಲು ಸೂಪರ್ ಓವರ್ ಏಕೆ ಆಡಿಸಲಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಅಭಿಮಾನಿಗಳಿಗೆ ಕಾಡಿದೆ. ಇದಕ್ಕೆ ಉತ್ತರ ಇಲ್ಲಿದೆ.
ಲಂಕಾ ಮತ್ತು ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯ ಟೈ ಗೊಂಡಾಗ ಸೂಪರ್ ಓವರ್ ಆಡಿಸಲಾಗಿತ್ತು ಆದರೆ, ಏಕದಿನ ಪಂದ್ಯ ಟೈ ಆದಾಗ ಏಕೆ ಸೂಪರ್ ಓಪರ್ ಆಡಿಸಲಿಲ್ಲ ಎಂದು ಅನೇಕ ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಸೂಪರ್ ಓವರ್ ಆಡಿಸದೇ ಇರಲು ಕೂಡ ಒಂದು ಕಾರಣವಿದೆ.
ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ) ನಿಯಮಗಳ ಪ್ರಕಾರ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಏಕದಿನ ಸರಣಿಯ ಪಂದ್ಯ ಟೈ ಆದರೆ ಇದನ್ನು ಟೈ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಯಾವುದೇ ಸೂಪರ್ ಓವರ್ ಆಡಿಸಲಾಗುವುದಿಲ್ಲ. ಆದರೆ, ಈ ನಿಯಮ ಟಿ20 ಕ್ರಿಕೆಟ್ಗೆ ಅನ್ವಯವಾಗುವುದಿಲ್ಲ. ಇಲ್ಲಿ ಸೂಪರ್ ಓವರ್ ಆಡಿಸಲಾಗುತ್ತದೆ. ಸೂಪರ್ ಓವರ್ ಕೂಡ ಟೈಗೊಂಡರೆ ಮತ್ತೊಂದು ಸೂಪರ್ ಓವರ್ ಆಡಿಸಲಾಗುತ್ತದೆ. ಫಲಿತಾಂಶ ಬರುವ ತನಕವೂ ಸೂಪರ್ ಓವರ್ ಆಡಿಸಲಾಗುತ್ತದೆ. ನಿನ್ನೆಯ ಪಂದ್ಯ ದ್ವಿಪಕ್ಷೀಯ ಸರಣಿಯ ಭಾಗವಾಗಿತ್ತು, ಆದ್ದರಿಂದ ಯಾವುದೇ ಸೂಪರ್ ಓವರ್ ಆಡಿಸಲಿಲ್ಲ. ಇನ್ನುಳಿದ ಎರಡು ಏಕದಿನ ಪಂದ್ಯಗಳಲ್ಲಿ ಗೆದ್ದವರು ಸರಣಿಯ ವಿಜೇತರಾಗಲಿದ್ದಾರೆ. ಒಂದೊಂದು ಪಂದ್ಯ ಗೆದ್ದರೆ ಸರಣಿ ಸಮಬಲವಾಗಲಿದೆ.
ಇದನ್ನೂ ಓದಿ IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈ
ಐಸಿಸಿ ಟೂರ್ನಿಯಲ್ಲಿ ಸಾಧ್ಯ
ದ್ವಿಪಕ್ಷೀಯ ಏಕದಿನ ಪಂದ್ಯದಲ್ಲಿ ಸೂಪರ್ ಓವರ್ ಆಡಿಸದಿದ್ದರೂ, ಐಸಿಸಿ ಟೂರ್ನಿಗಳು, ಏಷ್ಯಾ ಕಪ್, ತ್ರಿಕೋನ ಸರಣಿಯಂತಹ ಏಕದಿನ ಮಾದರಿ ಪಂದ್ಯಗಳಲ್ಲಿ ಟೈ ಆದರೆ ಸೂಪರ್ ಓವರ್ ನಡೆಸಲಾಗುತ್ತದೆ.
ರೋಚಕ ಪಂದ್ಯ
ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗಿ ಟೈ ನಲ್ಲಿ ಅಂತ್ಯಗೊಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 47.5 ಓವರ್ ಗಳಲ್ಲಿ 230 ರನ್ ಗಳಿಗೆ ಆಲೌಟಾಯಿತು. ಗೆಲುವಿಗೆ ಒಂದು ರನ್ ಬೇಕಿದ್ದಾಗ ಶಿವಂ ದುಬೆ ಮತ್ತು ಅರ್ಶ್ದೀಪ್ ಸಿಂಗ್ ಸತತವಾಗಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದು ವಿಕೆಟ್ ಕೈಚೆಲ್ಲಿದರು. ಸೋಲುವ ಭೀತಿಯಲ್ಲಿದ್ದ ಲಂಕಾ ಅಸಾಮಾನ್ಯ ಪ್ರದರ್ಶನ ತೋರಿ ಪಂದ್ಯವನ್ನು ಟೈ ಗೊಳಿಸುವ ಮೂಲಕ ನಿಟ್ಟುಸಿರುಬಿಟ್ಟಿತು.
ಭಾರತ ಪರ ಚೇಸಿಂಗ್ನಲ್ಲಿ ನಾಯಕ ರೋಹಿತ್ ಶರ್ಮ 47 ಎಸೆತಗಳಿಂದ 58 ರನ್ ಬಾರಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಯಿತು. ಉಳಿದಂತೆ ಕೆ.ಎಲ್ ರಾಹುಲ್ 31, ಅಕ್ಷರ್ ಪಟೇಲ್ 33 ರನ್ ಬಾರಿಸಿದರು.