ನ್ಯೂಯಾರ್ಕ್: ಅಮೆರಿಕ(IND vs USA) ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಯನ್ನು ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ಪಡೆದುಕೊಂಡಿದ್ದಾರೆ. ಸಿರಾಜ್ಗೆ ಒಲಿದ 2ನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸಿರಾಜ್ ಈ ಪ್ರಶಸ್ತಿ ಗೆದ್ದಿದ್ದರು. ನಿನ್ನೆಯ ಪಂದ್ಯದಲ್ಲಿ ಸಿರಾಜ್ ಅವರು 2 ಕ್ಯಾಚ್ ಮತ್ತು ಒಂದು ರನೌಟ್ ಮಾಡಿ ಗಮನಸೆಳೆದಿದ್ದರು. ಯುವರಾಜ್ ಸಿಂಗ್(Yuvraj Singh) ಅವರು ವಿಶೇಷ ಅತಿಥಿಯಾಗಿ ಡ್ರೆಸ್ಸಿಂಗ್ ರೂಮ್ಗೆ ಬಂದು ಈ ಪ್ರಶಸ್ತಿ ಪ್ರದಾನ ಮಾಡಿದರು.
ಎನ್ ಆರ್ ಕುಮಾರ್ ಅವರ ಕ್ಯಾಚೊಂದನ್ನು ಸಿರಾಜ್ ಬೌಂಡರಿ ಲೈನ್ನಲ್ಲಿ ಅತ್ಯದ್ಭುತ ರೀತಿಯಲ್ಲಿ ಹಾರಿ ಹಿಡಿದರು. ಕಳೆದ ವರ್ಷ ನಡೆದಿದ್ದ ಏಕದಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮ್ಯಾನೆಜ್ಮೆಂಟ್ ಆಟಗಾರರಲ್ಲಿ ಹೆಚ್ಚಿನ ಸ್ಫೂರ್ತಿ ತುಂಬವ ನಿಟ್ಟಿನಲ್ಲಿ, ಪಂದ್ಯವೊಂದರಲ್ಲಿ ಉತ್ತಮ ಫೀಲ್ಡಿಂಗ್(Best Fielder Award) ನಡೆಸಿದರೆ ಆತನನ್ನು ಗುರುತಿಸಿ ಚಿನ್ನದ ಪದಕ ನೀಡುವ ಕಾರ್ಯವನ್ನು ಜಾರಿಗೆ ತಂದಿತ್ತು. ಈ ಪ್ರಕ್ರಿಯೆ ಟಿ20 ವಿಶ್ವಕಪ್ನಲ್ಲಿಯೂ ಮುಂದುವರಿದೆ.
ಸೂಪರ್-8ಗೆ ಲಗ್ಗೆಯಿಟ್ಟ ಭಾರತ
ಅಮೆರಿಕ(IND vs USA) ವಿರುದ್ಧ ಭಾರತ 7 ವಿಕೆಟ್ಗಳ ಗೆಲುವು ಸಾಧಿಸುವ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್-8 ಪ್ರವೇಶ ಪಡೆದಿದೆ. ಇಲ್ಲಿನ ನಾಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಅಮೆರಿಕ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 110 ರನ್ ಬಾರಿಸಿತು. ಜವಾಬಿತ್ತ ಭಾರತ ಈ ಸಣ್ಣ ಮೊತ್ತವನ್ನು 18.2 ಓವರ್ ಎದುರಿಸಿ 3 ವಿಕೆಟ್ ಕಳೆದುಕೊಂಡು 111 ರನ್ ಬಾರಿಸಿ ಗೆಲುವಿನ ದಡ ಸೇರಿತು.
ಇದನ್ನೂ ಓದಿ IND vs USA: ಭಾರತಕ್ಕೆ 5 ಪೆನಾಲ್ಟಿ ರನ್ ಲಭಿಸಿದ್ದು ಹೇಗೆ?
ಎಡಗೈ ವೇಗಿ ಅರ್ಶದೀಪ್ ಸಿಂಗ್ ಈ ಪಂದ್ಯದಲ್ಲಿ 4 ಓವರ್ ಎಸೆದು ಕೇವಲ 9 ರನ್ಗೆ 4 ವಿಕೆಟ್ ಕಿತ್ತು ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದರು. ಜತೆಗೆ ಟಿ20 ವಿಶ್ವಕಪ್ನಲ್ಲಿ ಭಾರತ ಪರ ಶ್ರೇಷ್ಠ ಬೌಲಿಂಗ್ ನಡೆಸಿದ ಆಟಗಾರ ಎನ್ನುವ ಹಿರಿಮೆಗೂ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಅಶ್ವಿನ್ ಹೆಸರಿನಲ್ಲಿತ್ತು. ಅಶ್ವಿನ್ ಅವರು 2014ರ ಟೂರ್ನಿಯಲ್ಲಿ 11ರನ್ಗೆ 4 ವಿಕೆಟ್ ಕೆಡವಿದ್ದರು.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್ ನಡೆಸಲು ವಿಫಲವಾಗಿದ್ದ ಸೂರ್ಯಕುಮಾರ್ ಮತ್ತು ದುಬೆ ಈ ಪಂದ್ಯದಲ್ಲಿ ಉತ್ತಮ ಜತೆಯಾಟ ನಡೆಸುವ ಮೂಲಕ ಗಮನಸೆಳೆದರು. ಗೆಲುವಿಗೆ 20 ರನ್ ಬೇಕಿದ್ದಾಗ ಸೂರ್ಯಕುಮಾರ್ ತಮ್ಮ ಎಂದಿನ ಶೈಲಿಯಾದ ಸ್ಫೋಟಕ ಬ್ಯಾಟಿಂಗ್ಗೆ ಒಗ್ಗಿಕೊಂಡರು. ಸತತ ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ನೆರದಿದ್ದ ಪ್ರೇಕ್ಷರಕರಿಗೆ ಕೊನೆಯ ಕ್ಷಣದಲ್ಲಿ ಮನರಂಜನೆ ನೀಡಿದರು. ಜತೆಗೆ ಅರ್ಧಶತಕ ಬಾರಿಸಿ ಮಿಂಚಿದರು. ದುಬೆ ಮತ್ತು ಸೂರ್ಯ ಜೋಡಿ 4 ವಿಕೆಟ್ಗೆ ಅಜೇಯ 72 ರನ್ ಒಟ್ಟುಗೂಡಿಸಿತು. ಸೂರ್ಯಕುಮಾರ್ 49 ಎಸೆತ ಎದುರಿಸಿ ತಲಾ 2 ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ಭರ್ತಿ 50 ರನ್ ಗಳಿಸಿದರೆ, ದುಬೆ 35 ಎಸೆತಗಳಿಂದ 31 ರನ್ ಬಾರಿಸಿದರು.