ನ್ಯೂಯಾರ್ಕ್: ಬುಧವಾರ ರಾತ್ರಿ ನಡೆದ ಅಮೆರಿಕ(IND vs USA) ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳ ಗೆಲುವು ಸಾಧಿಸಿ ಸೂಪರ್ 8ಗೆ ಲಗ್ಗೆಯಿಟ್ಟಿತ್ತು. ಇದೇ ಪಂದ್ಯದಲ್ಲಿ ಭಾರತಕ್ಕೆ ಪೆನಾಲ್ಟಿ ರೂಪದಲ್ಲಿ 5 ರನ್(5 penalty runs) ನೀಡಲಾಯಿತು. ಅಮೆರಿಕ ತಂಡ ನಿಗದಿತ ಅವದಿಯೊಳಗೆ ಓವರ್ ಮಾಡದ ಕಾರಣ ಭಾರತಕ್ಕೆ ಈ ರನ್ ಲಭಿಸಿತು.
ಐಸಿಸಿ 41.9.4 ನಿಯಮದ ಪ್ರಕಾರ ಫೀಲ್ಡಿಂಗ್ ತಂಡವು ಹಿಂದಿನ ಓವರ್ ಮುಗಿದ 60 ಸೆಕೆಂಡುಗಳ ಒಳಗೆ ಮೊತ್ತೊಂದು ಓವರ್ ನಡೆಸಬೇಕು. ಎಲೆಕ್ಟ್ರಾನಿಕ್ ಗಡಿಯಾರವನ್ನು ಮೈದಾನದಲ್ಲಿ ಪ್ರದರ್ಶಿಸಲಾಗುತ್ತದೆ, ಅದು 60 ಸೆಂಕಟ್ನಿಂದ ಶೂನ್ಯ ಸೆಕೆಂಡುಗಳನ್ನು ಎಣಿಸುತ್ತದೆ. ಶೂನ್ಯ ಸೆಕೆಂಟ್ ತಲುಪಿದಾಗ, ಫೀಲ್ಡಿಂಗ್ ತಂಡವು ಮುಂದಿನ ಓವರ್ ಅನ್ನು ಪ್ರಾರಂಭಿಸಲು ಸಿದ್ಧವಾಗಿಲ್ಲದಿದ್ದರೆ ಆಗ ಎದುರಾಳಿ ತಂಡಕ್ಕೆ ಪೆನಾಲ್ಟಿ ರೂಪದಲ್ಲಿ 5 ರನ್ ನೀಡಲಾಗುತ್ತದೆ. ನಿನ್ನೆ ನಡೆದ ಪಂದ್ಯದಲ್ಲಿಯೂ ಅಮೆರಿಕ ತಂಡ ನಿಗದಿತ ಸಯದಲ್ಲಿ ಬೌಲಿಂಗ್ ಮಾಡದ ಕಾರಣ ಈ ಶಿಕ್ಷೆಗೆ ಗುರಿಯಾಯಿತು.
ಪಂದ್ಯ ಗೆದ್ದ ಭಾರತ
ಇಲ್ಲಿನ ನಾಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಅಮೆರಿಕ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 110 ರನ್ ಬಾರಿಸಿತು. ಜವಾಬಿತ್ತ ಭಾರತ ಈ ಸಣ್ಣ ಮೊತ್ತವನ್ನು 18.2 ಓವರ್ ಎದುರಿಸಿ 3 ವಿಕೆಟ್ ಕಳೆದುಕೊಂಡು 111 ರನ್ ಬಾರಿಸಿ ಗೆಲುವಿನ ದಡ ಸೇರಿತು.
ಇದನ್ನೂ ಓದಿ Virat Kohli: ಟಿ20 ವಿಶ್ವಕಪ್ನಲ್ಲಿ ಮೊದಲ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದ ವಿರಾಟ್ ಕೊಹ್ಲಿ
ಚೇಸಿಂಗ್ ವೇಳೆ ಭಾರತ ಕೂಡ ಅಮೆರಿಕದಂತೆ ಆರಂಭಿಕ ಆಘಾತ ಎದುರಿಸಿತು. ವಿರಾಟ್ ಕೊಹ್ಲಿ(0) ಮತ್ತು ರೋಹಿತ್ ಶರ್ಮ(3) ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಬಳಿಕ ಬಂದ ಪಂತ್ ಕೂಡ ಬಡಬಡನೆ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ 18 ರನ್ಗೆ ಆಟ ಮುಗಿಸಿದರು. ಪಾಕ್ ಮೂಲದ ಅಲಿ ಖಾನ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಅಲ್ಪ ಮೊತ್ತಕ್ಕೆ ಮೂರು ವಿಕೆಟ್ ಕಳೆದುಕೊಂಡ ಭಾರತ ಒಂದು ಹಂತದಲ್ಲಿ ಈ ಮೊತ್ತವನ್ನು ಬಾರಿಸಲು ಸಾಧ್ಯವೇ ಎಂಬ ಅನುಮಾನ ಕೂಡ ಕಾಡಲಾರಂಭಿಸಿತು. ಆದರೆ, ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಯಾದವ್ ಯಾವುದೇ ಅಪಾಯಕಾರಿ ಹೊಡೆತಗಳಿಗೆ ಮುಂದಾಗದೆ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು. ಇವರಿಗೆ ಮತ್ತೊಂದು ತುದಿಯಲ್ಲಿ ಶಿವಂ ದುಬೆ ಕೂಡ ಉತ್ತಮ ಸಾಥ್ ನೀಡಿದರು.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್ ನಡೆಸಲು ವಿಫಲವಾಗಿದ್ದ ಸೂರ್ಯಕುಮಾರ್ ಮತ್ತು ದುಬೆ ಈ ಪಂದ್ಯದಲ್ಲಿ ಉತ್ತಮ ಜತೆಯಾಟ ನಡೆಸುವ ಮೂಲಕ ಗಮನಸೆಳೆದರು. ಗೆಲುವಿಗೆ 20 ರನ್ ಬೇಕಿದ್ದಾಗ ಸೂರ್ಯಕುಮಾರ್ ತಮ್ಮ ಎಂದಿನ ಶೈಲಿಯಾದ ಸ್ಫೋಟಕ ಬ್ಯಾಟಿಂಗ್ಗೆ ಒಗ್ಗಿಕೊಂಡರು. ಸತತ ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ನೆರದಿದ್ದ ಪ್ರೇಕ್ಷರಕರಿಗೆ ಕೊನೆಯ ಕ್ಷಣದಲ್ಲಿ ಮನರಂಜನೆ ನೀಡಿದರು. ಜತೆಗೆ ಅರ್ಧಶತಕ ಬಾರಿಸಿ ಮಿಂಚಿದರು. ದುಬೆ ಮತ್ತು ಸೂರ್ಯ ಜೋಡಿ 4 ವಿಕೆಟ್ಗೆ ಅಜೇಯ 72 ರನ್ ಒಟ್ಟುಗೂಡಿಸಿತು. ಸೂರ್ಯಕುಮಾರ್ 49 ಎಸೆತ ಎದುರಿಸಿ ತಲಾ 2 ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ಭರ್ತಿ 50 ರನ್ ಗಳಿಸಿದರೆ, ದುಬೆ 35 ಎಸೆತಗಳಿಂದ 31 ರನ್ ಬಾರಿಸಿದರು.